ಜೈಪುರ: ಯುಗಾದಿ ಹಬ್ಬದ ದಿನ ಕರೌಲಿ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಯಿಂದ ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರೌಲಿ ಗ್ರಾಮದಲ್ಲಿ ಏಪ್ರಿಲ್ ಏಪ್ರಿಲ್ 7ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಜೇಂದ್ರ ಶೇಖಾವತ್ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳ ಪರೀಕ್ಷೆಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಹಾಗೂ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಖರೀದಿಸಲು ಎರಡು ಗಂಟೆಗಳ ಅವಕಾಶ ನೀಡಲಾಗುವುದು ಎಂದು ಕರೌಲಿ ಜಿಲ್ಲಾಧಕಾರಿ ಶೇಖಾವತ್ ತಿಳಿಸಿದ್ದಾರೆ.
ಕಾನೂನು ಉಲ್ಲಂಘಿಸಿದ 46 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈವರೆಗೂ ೨೧ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಐಜಿಪಿ ಪ್ರಸನ್ನ ಕುಮಾರ್ ಖಮೆಸ್ರಾ ಮಾಹಿತಿ ನೀಡಿದ್ದಾರೆ.
ಯುಗಾದಿ ಹಬ್ಬದಂದು ಕರೌಲಿಯಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಜರಂಗ ದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಬೃಹತ್ ಬೈಕ್ ರ್ಯಾಲಿ ಆಯೋಜಿಸಿದ್ವು. ರ್ಯಾಲಿ ವೇಳೆ ಮತ್ತೊಂದು ಗುಂಪು ಏಕಾಏಕಿ ಕಲ್ಲುತೂರಾಟ ನಡೆಸಿತ್ತು. ಈ ವೇಳೆ ಕಿಡಿಗೇಡಿಗಳು ಹಲವು ಮನೆ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಸುಮಾರು 35 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
3 ಮಹಿಳೆಯರು, ಮಗುವಿನ ಪ್ರಾಣ ಉಳಿಸಿದ ಕಾನ್ಸ್‌ಟೇಬಲ್
ಇನ್ನು, ಉದ್ರಿಕ್ತರ ಗುಂಪು ಮನೆಯೊಂದಕ್ಕೆ ಬೆಂಕಿ ಹಚ್ಚಿತ್ತು. ಈ ವೇಳೆ ಮನೆಯಲ್ಲಿದ್ದ ಮೂವರು ಮಹಿಳೆಯರು ಹಾಗೂ ಮಗು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಕಾನ್ಸ್‌ಟೇಬಲ್ ನೇತ್ರೇಶ್ ಶರ್ಮಾ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಲ್ವರನ್ನು ರಕ್ಷಿಸಿದ್ದಾರೆ. ನೇತ್ರೇಶ್ ಅವರ ಈ ಕಾರ್ಯಕ್ಕೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೇದೆ ನೇತ್ರೇಶ್ ಶರ್ಮಾ ಸಾಹಸಕ್ಕೆ ಗೆಹ್ಲೋಟ್ ಶಹಬ್ಬಾಸ್
ನಾಲ್ವರು ಅಮಾಯಕರ ಜೀವ ಉಳಿಸಿದ ಪೇದೆ ನೇತ್ರೇಶ್ ಶರ್ಮಾ ಅವರ ಕಾರ್ಯಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೇತ್ರೇಶ್ ಶರ್ಮಾ ಅವರನ್ನು ಹೆಡ್ ಕಾನ್ಸ್‌ಟೇಬಲ್ ಆಗಿ ಬಡ್ತಿ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಅಶೋಕ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ.