ನವ ದೆಹಲಿ: ಭಾರತದಲ್ಲಿ ನಶಿಸಿರುವ ಚೀತಾಗಳ ಸಂತತಿಯನ್ನು ಮತ್ತೆ ಪುನರುಜ್ಜೀವನಗೊಳಿಸಿ, ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಚೀತಾ ಸ್ಥಳಾಂತರ ಯೋಜನೆ ಅಂದರೆ ಚೀತಾಗಳನ್ನು ವಿದೇಶಗಳಿಂದ ಭಾರತಕ್ಕೆ ಕರೆತಂದು, ಇಲ್ಲಿ ಅವುಗಳ ಸಂತತಿ ವೃದ್ಧಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಸರ್ಕಾರ, ಈ ಯೋಜನೆಯಡಿಯಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ 8 ಚೀತಾಗಳನ್ನು ಕರೆತಂದಿದೆ. ಐದು ಗಂಡು ಮತ್ತು ಮೂರು ಹೆಣ್ಣು ಚೀತಾಗಳು ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ ಬಂದಿದ್ದು ಇವೆಲ್ಲವೂ ಮಧ್ಯಪ್ರದೇಶ ಕುನೋ ಪಾಲ್ಪುರ ಉದ್ಯಾನವನದಲ್ಲಿ ಇವೆ.
ಈ ಮಧ್ಯೆ ಇನ್ನೂ 12 ಚೀತಾಗಳು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಎಂಬ ಮಾಹಿತಿ ಹೊರಬಿದ್ದಿದೆ. ಸೆಪ್ಟೆಂಬರ್ನಲ್ಲಿ 8 ಚೀತಾಗಳನ್ನು ತಂದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ್ದ ಚೀತಾ ಸಂರಕ್ಷಣಾ ನಿಧಿ ಪ್ರಧಾನ ನಿರ್ದೇಶಕಿ ಹಾಗೂ ನಮಿಬಿಯಾದಿಂದ ಭಾರತಕ್ಕೆ ಚೀತಾ ಕರೆ ತರುವ ಕಾರ್ಯಕ್ಕೆ ಸಮನ್ವಯಕರರಾಗಿರುವ ಲಾರಿ ಮಾರ್ಕರ್, ‘ಮುಂದಿನ ದಿನಗಳಲ್ಲಿ ಇನ್ನಷ್ಟು ಚೀತಾಗಳು ಭಾರತಕ್ಕೆ ಬರಲಿವೆ’ ಎಂದು ಹೇಳಿದ್ದರು.
ಚೀತಾ ಸ್ಥಳಾಂತರ ಯೋಜನೆಯಡಿ ಇನ್ನೂ 12 ಚೀತಾಗಳನ್ನು ಜನವರಿ 20ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲು ಸಿದ್ಧತೆ ನಡೆದಿದೆ. ಈ ಸಲ ನಮೀಬಿಯಾ ಮತ್ತು ಇತರ ಕೆಲವು ದೇಶಗಳಿಂದ ಚೀತಾಗಳನ್ನು ಕರೆತರಲಾಗುವುದು. ಈ ಸಂಬಂಧ ವಿವಿಧ ಪ್ರಕ್ರಿಯೆಗಳನ್ನು ನಡೆಸುವ ಸಲುವಾಗಿ ಕೇಂದ್ರ ಅರಣ್ಯ ಮಹಾ ನಿರ್ದೇಶಕ ಚಂದ್ರಪ್ರಕಾಶ್ ಗೋಯಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸದಸ್ಯ ಕಾರ್ಯದರ್ಶಿ ಎಸ್.ಪಿ. ಯಾದವ್ ಮತ್ತು ಅರಣ್ಯ ಸಚಿವಾಲಯದ ಇತರ ಅಧಿಕಾರಿಗಳು ಜನವರಿ 13ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾಗಳ ಮೊದಲ ಬೇಟೆ; ಅರಣ್ಯಕ್ಕೆ ಬಿಡುತ್ತಿದ್ದಂತೆ ಕೊಂದಿದ್ದು ಯಾವ ಪ್ರಾಣಿಯನ್ನು ಗೊತ್ತಾ?