ಪೂಂಚ್: ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಏಪ್ರಿಲ್ 20ರಂದು ನಡೆದ ಉಗ್ರದಾಳಿಯಲ್ಲಿ (Poonch Terror Attack) ರಾಷ್ಟ್ರೀಯ ರೈಫಲ್ಸ್ನ ಐವರು ಯೋಧರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ 12 ಮಂದಿಯನ್ನು ಭದ್ರತಾ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಪೂಂಚ್ನ ಬಾಟಾ ಡೋರಿಯಾ ಬಳಿಯ ದಟ್ಟ ಅರಣ್ಯದ ಬಳಿ ಏ.20ರಂದು ಸೇನಾವಾಹನದ ಮೇಲೆ ಭಯೋತ್ಪಾದಕರು ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಿದ್ದರು. ಅದರಲ್ಲಿದ್ದ ಐವರು ಯೋಧರು ಮೃತಪಟ್ಟಿದ್ದಾರೆ. ಇದು ಲಷ್ಕರೆ ತೊಯ್ಬಾ ಸಂಘಟನೆಯ ಕೃತ್ಯ ಎಂಬುದು ಸ್ಪಷ್ಟವಾಗಿದೆ ಮತ್ತು ಈ ದಾಳಿಯನ್ನು ಏಳು ಉಗ್ರರು ನಡೆಸಿದ್ದಾರೆ ಎಂದೂ ವರದಿಯಾಗಿದೆ. ದಾಳಿ ಮಾಡಿದ ಉಗ್ರರ ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ. ದಾಳಿ ನಡೆದ ಅರಣ್ಯದ ಬಳಿ ಸೇನೆಯ ಎಂಐ ಹೆಲಿಕಾಪ್ಟರ್, ಸ್ನಿಫರ್ ಶ್ವಾನಗಳು, ಡ್ರೋನ್ಗಳು ಬೀಡುಬಿಟ್ಟಿದ್ದು ಉಗ್ರರ ಜಾಡು ಹಿಡಿಯುವ ಕಾರ್ಯ ನಡೆಯುತ್ತಿದೆ.
ಇನ್ನು ಬಂಧಿತರಾದ 12ಮಂದಿಯನ್ನು ವಿವಿಧ ಹಂತಗಳಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ದಾಳಿ ಮಾಡಿದ ಉಗ್ರರ ಗುಂಪು ಕಳೆದ ಒಂದೂವರೆ ವರ್ಷಗಳಿಂದಲೂ ಈ ಸ್ಥಳದಲ್ಲಿ ಸಕ್ರಿಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಗುಂಪಿನ ಗುರುತು ಪತ್ತೆ ಮಾಡಿ, ಉಗ್ರರನ್ನು ಸೆರೆ ಹಿಡಿಯಲು ಪೂರಕವಾಗುವ ನಿಟ್ಟಿನಲ್ಲಿ ವಿಚಾರಣೆ, ಪರಿಶೀಲನೆ ಮಾಡಲಾಗುತ್ತಿದೆ ಎಂದು ರಕ್ಷಣಾ ಪಡೆ ಅಧಿಕಾರಿಗಳು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಜಮ್ಮು ಕಾಶ್ಮೀರ ಪೊಲೀಸ್ ಡೈರೆಕ್ಟ್ ಜನರಲ್ ದಿಲ್ಬಾಗ್ ಸಿಂಗ್ ಅವರು ಹೆಚ್ಚುವರಿ ಡಿಜಿ ಮುಕೇಶ್ ಸಿಂಗ್ ಅವರೊಂದಿಗೆ ಈಗಾಗಲೇ ಘಟನೆ ನಡೆದ ಸ್ಥಳಕ್ಕೆ ಮತ್ತು ನೆರೆಯ ಜಿಲ್ಲೆ ರಾಜೌರಿ ಜಿಲ್ಲೆಗೆ ತೆರಳಿ, ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಹಾಗೇ ಉಗ್ರ ದಾಳಿಯ ತನಿಖೆಯ ಗತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ರಾಷ್ಟ್ರೀಯ ತನಿಖಾ ದಳ ಕೂಡ ಈಗಾಗಲೇ ಪೂಂಚ್ನಲ್ಲಿ ಉಗ್ರದಾಳಿ ನಡೆದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಈ ಕೇಸ್ನ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Poonch Terror Attack: ಸೇನಾ ವಾಹನದ ಮೇಲೆ ದಾಳಿ ಮಾಡಿದ್ದು ಲಷ್ಕರೆ ತೊಯ್ಬಾದ 7 ಉಗ್ರರು; ಅರಣ್ಯದಲ್ಲಿ ಕಾದು ಕುಳಿತು ಅಟ್ಯಾಕ್