ಲಖನೌ: ಉತ್ತರ ಪ್ರದೇಶದ ಲಖನೌ ಏರ್ಪೋರ್ಟ್ ಸಮೀಪ ಭಗವಂತ ಶ್ರೀರಾಮನ ಸಹೋದರ ಲಕ್ಷ್ಮಣನ 12 ಅಡಿ ಎತ್ತರದ ಕಂಚಿನ ಪ್ರತಿಮೆ (Laxman statue Lucknow)ಯನ್ನು ಗುರುವಾರ ಅನಾವರಣಗೊಳಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೇರಿ ಈ ಪ್ರತಿಮೆಯನ್ನು ಉದ್ಘಾಟಿಸಿದರು. ಅದರೊಂದಿಗೆ ಇನ್ನೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿನಿಧಿಸಿದ್ದ ಲಖನೌ ಲೋಕಸಭಾ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವ ರಾಜನಾಥ್ ಸಿಂಗ್ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಗಟ್ಟಿಯಾಗಿದ್ದರಿಂದ, ಉಳಿದ ಕ್ಷೇತ್ರಗಳ ಅಭಿವೃದ್ಧಿಯೂ ವೇಗವಾಗಿದೆ. ಉತ್ತರ ಪ್ರದೇಶದ ಬಗ್ಗೆ ಬರೀ ನಮ್ಮ ದೇಶದ ಇತರ ರಾಜ್ಯಗಳಲ್ಲಷ್ಟೇ ಅಲ್ಲ, ವಿದೇಶದಲ್ಲಿ ನೆಲೆಸಿರುವ ಭಾರತೀಯರೂ ಕೂಡ ಮಾತನಾಡುತ್ತಾರೆ. ಇಲ್ಲಿ ಉದ್ಯಮದಲ್ಲಿ ಹೂಡಿಕೆ ಮಾಡಲು ಹಲವರು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಹೇಳಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಉತ್ತರ ಪ್ರದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೂಡಿಕೆಗೆ ಅತ್ಯುತ್ತಮ ರಾಜ್ಯ ಮತ್ತು ಪ್ರವಾಸೋದ್ಯಮ ತಾಣವೂ ಆಗಿದೆ. ರೈತರು-ಯುವಕರ ಅಭಿವೃದ್ಧಿಯನ್ನು ಆದ್ಯತೆಯಾಗಿಟ್ಟುಕೊಳ್ಳಲಾಗಿದೆ. ಇದು ನವ ಭಾರತದ ನವ ಉತ್ತರ ಪ್ರದೇಶ’ ಎಂದು ಹೇಳಿದರು.
ಇದನ್ನೂ ಓದಿ: Lucknow: ಲಖನೌ ನಗರವನ್ನು ಲಕ್ಷ್ಮಣಪುರ ಎಂದು ಮರುನಾಮಕರಣ ಮಾಡಲು ಪ್ರಧಾನಿಗೆ ಪತ್ರ ಬರೆದ ಬಿಜೆಪಿ ಸಂಸದ
ಉತ್ತರ ಪ್ರದೇಶದ ರಾಜಧಾನಿಯಾದ ಲಖನೌನ್ನು ಲಖನ್ಪುರ ಅಥವಾ ಲಕ್ಷ್ಮಣಪುರ ಎಂದು ಬದಲಿಸುವಂತೆ ಇತ್ತೀಚೆಗಷ್ಟೇ ಬಿಜೆಪಿ ಸಂಸದ ಸಂಗಮ್ಲಾಲ್ ಗುಪ್ತಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಲಖನೌ ಎಂಬ ಹೆಸರನ್ನು 18ನೇ ಶತಮಾನದಲ್ಲಿ ನವಾಬ್ ಅಸಫುದ್ದೌಲಾ ಕೊಟ್ಟಿದ್ದಾನೆ. ಶ್ರೀರಾಮ ತನ್ನ ಸೋದರ ಲಕ್ಷ್ಮಣನಿಗೆ ಈ ಪ್ರದೇಶವನ್ನು ಕೊಟ್ಟಿದ್ದ ಎಂದು ಪುರಾಣದಲ್ಲಿ ಹೇಳಲಾಗಿದೆ. ಹೀಗಾಗಿ ಲಖನೌ ಹೆಸರು ಬೇಡ, ಲಕ್ಷ್ಮಣಪುರ/ಲಖನ್ಪುರ ಎಂದು ನಾಮಕರಣ ಮಾಡಬೇಕು ಎಂದು ಸಂಗಮ್ಲಾಲ್ ಗುಪ್ತಾ ಪ್ರತಿಪಾದಿಸಿದ್ದಾರೆ. ಅದರ ಬೆನ್ನಲ್ಲೇ ಲಖನೌ ಏರ್ಪೋರ್ಟ್ ಬಳಿಯೇ ಲಕ್ಷ್ಮಣನ 12 ಅಡಿ ಎತ್ತರದ ಮೂರ್ತಿ ಅನಾವರಣಗೊಂಡಿದೆ.