ನವ ದೆಹಲಿ: ದಕ್ಷಿಣ ಆಫ್ರಿಕಾದಿಂದ ಹೊರಟಿದ್ದ 12 ಚೀತಾಗಳು ಮಧ್ಯಪ್ರದೇಶ ತಲುಪಿವೆ. ಎರಡನೇ ಬ್ಯಾಚ್ನಲ್ಲಿ, ಐಎಎಫ್ ಸಿ-17 ಏರ್ಕ್ರಾಫ್ಟ್ನಲ್ಲಿ ಬಂದು ಗ್ವಾಲಿಯರ್ನ ಏರ್ಪೋರ್ಸ್ ಸ್ಟೇಶನ್ನಲ್ಲಿ ಲ್ಯಾಂಡ್ ಆದ 12 ಚೀತಾಗಳನ್ನು ಕುನೋ ನ್ಯಾಶನಲ್ ಪಾರ್ಕ್ಗೆ ಕರೆದೊಯ್ಯಲಾಗಿದೆ. ಈ ಚೀತಾಗಳು ದಕ್ಷಿಣ ಆಫ್ರಿಕಾದಿಂದ ಜೊಹಾನ್ಸ್ಬರ್ಗ್ನಿಂದ 10 ತಾಸು ಪ್ರಯಾಣ ಮಾಡಿ, ಮಧ್ಯಪ್ರದೇಶಕ್ಕೆ ಬಂದಿಳಿದಿವೆ. ಈ 12 ಚೀತಾಗಳಲ್ಲಿ ಐದು ಹೆಣ್ಣು ಮತ್ತು ಏಳು ಗಂಡು ಚೀತಾಗಳು.
ಇದನ್ನೂ ಓದಿ: Cheetah in India: 12 ಚೀತಾಗಳು ಇಂದು ಭಾರತಕ್ಕೆ; ಈ 10 ಅಂಶ ತಿಳಿದಿರಲಿ
ಭಾರತದಲ್ಲಿ ನಶಿಸಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಭಾರತಕ್ಕೆ ವಿದೇಶಗಳಿಂದ ಚೀತಾವನ್ನು ತಂದು, ಇಲ್ಲಿ ಸಂತಾನವೃದ್ಧಿ ಮಾಡಿಸುವ ಯೋಜನೆ ಮೊಟ್ಟಮೊದಲು ಪ್ರಾರಂಭಗೊಂಡಿದ್ದು 2009ರಲ್ಲಿ. ಆದರೆ ದಶಕಗಳ ಕಾಲ ಅದು ನೆನೆಗುದಿಗೆ ಬಿದ್ದಿತ್ತು. ಮತ್ತೆ 2021ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡರೂ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಹಿನ್ನಡೆಯಾಗಿತ್ತು. ಈಗೆಲ್ಲ ವಿಘ್ನಗಳೂ ಕಳೆದು 2022ರ ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ 8 ಚೀತಾಗಳು ಬಂದಿವೆ. ಹಾಗೇ, ಮುಂಬರುವ ವರ್ಷಗಳಲ್ಲೂ ಇದು ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಅಂದಹಾಗೇ, ನಮೀಬಿಯಾದಿಂದ ಬಂದ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು.