ಬರೇಲಿ: ಅದೆಷ್ಟು ಚಿಕ್ಕಪುಟ್ಟ ಮಕ್ಕಳು ಬೀದಿ ನಾಯಿಗಳ (Stray Dogs) ಕ್ರೌರ್ಯಕ್ಕೆ ಬಲಿಯಾಗುತ್ತಿವೆ ಲೆಕ್ಕವಿಲ್ಲ. ಈಗ ಉತ್ತರ ಪ್ರದೇಶದ ಬರೇಲಿಯ ಸಿಬಿ ಗಂಜ್ ಎಂಬಲ್ಲಿ ಒಂದಷ್ಟು ಬೀದಿ ನಾಯಿಗಳು ಸೇರಿ, 12ವರ್ಷದ ಬಾಲಕನ ಮೇಲೆ ದಾಳಿ (Stray Dogs Attack) ನಡೆಸಿ, ಹತ್ಯೆಗೈದಿವೆ. ಇನ್ನೊಬ್ಬ ಬಾಲಕ ಗಾಯಗೊಂಡಿದ್ದಾನೆ. ಮೃತ ಹುಡುಗ ಅಯಾನ್. ಈತ ಖಾನಾ ಗೌಂಟಿಯಾ ಎಂಬ ಹಳ್ಳಿಯಲ್ಲಿ, ಇನ್ನೂ ಹಲವರು ಬಾಲಕರ ಜತೆ ಸೇರಿ ಆಟವಾಡುತ್ತಿದ್ದ. ಆಗ ಅಲ್ಲಿಗೆ ಬೀದಿನಾಯಿಗಳ ದಂಡೇ ಬಂದಿದೆ. ಅಯಾನ್ ಅಲ್ಲಿಂದ ಓಡಿದ್ದಾನೆ. ಈ ನಾಯಿಗಳು ಅವನನ್ನು ಬೆನ್ನಟ್ಟಿ ಹೋಗಿವೆ. ಅಯಾನ್ ಕೆಳಗೆ ಬಿದ್ದಾಗ ಅವನ ಮೇಲೆ ಎರಗಿ, ಕಚ್ಚಿವೆ.
ಅಯಾನ್ನನ್ನು ಮುತ್ತಿಕೊಂಡು, ಕಚ್ಚುತ್ತಿದ್ದ ನಾಯಿಗಳನ್ನು ದಾರಿಹೋಕರೊಬ್ಬರು ಓಡಿಸಿದ್ದಾರೆ. ರಕ್ತದ ಮಡುವಲ್ಲಿ ಇದ್ದಿದ್ದ ಅಯಾನ್ನನ್ನು ಅವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಬರೇಲಿಯಲ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ನಾಯಿಗಳಿಗೆ ಕಡಿವಾಣವೇ ಇಲ್ಲ ಎಂಬಂತೆ ಆಗಿದೆ. ಎರಡು ತಿಂಗಳ ಹಿಂದೆ ಬರೇಲಿಯಲ್ಲಿ ಮೂರು ವರ್ಷದ ಮಗುವೊಂದು ಬೀದಿ ನಾಯಿಗಳ ಬಾಯಿಗೆ ಬಲಿಯಾಗಿತ್ತು. ಆಕೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ನಾಯಿಗಳು ಬಂದು ಆಕೆಯನ್ನು ಸುಮಾರು 150 ಮೀಟರ್ ದೂರ ಎಳೆದುಕೊಂಡು ಹೋಗಿ, ಕಚ್ಚಿ ತುಂಡರಿಸಿದ್ದವು.
ಇದನ್ನೂ ಓದಿ: ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳಿಸಿ, ಅವರು ಕೊಂದು ತಿಂತಾರೆ ಎಂದ ಶಾಸಕ; ಸಿಡಿಮಿಡಿಗೊಂಡ ಪ್ರಾಣಿಗಳ ಹಕ್ಕು ರಕ್ಷಕರು
ಕಳೆದ ವರ್ಷ ಡಿಸೆಂಬರ್ನಲ್ಲಿ ಕೂಡ ಇದೇ ಸಿಬಿ ಗಂಜ್ ಏರಿಯಾದ ಮಥುರಾಪುರ ಗ್ರಾಮದಲ್ಲಿ ಗೋಲು ಎಂಬ ಹುಡುಗನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಈ ಹುಡುಗ ಕೂಡ ಸ್ನೇಹಿತರ ಜತೆ ಆಟವಾಡುತ್ತಿದ್ದ. ಏಳೆಂಟು ನಾಯಿಗಳು ಒಮ್ಮೆಲೇ ದಾಳಿ ಮಾಡಿ, ಗಾಯಗೊಳಿಸಿದ್ದವು. ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಹೀಗೆ ಪದೇಪದೆ ಮಕ್ಕಳ ಮೇಲೆ ಶ್ವಾನಗಳು ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಹಲವು ಬಾರಿ ಅವರು ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಮುನ್ಸಿಪಲ್ ಕಾರ್ಪೋರೇಶನ್ಗಳಿಗೆ ಪತ್ರ ಬರೆದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿದ್ದಾರೆ. ಆದರೆ ಆಡಳಿತಗಳು ಕಣ್ಮುಚ್ಚಿ ಕುಳಿತಿವೆ. ನಮ್ಮ ಮಕ್ಕಳ ಜೀವ ಹೋಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.