ನವ ದೆಹಲಿ: ದ್ರೌಪದಿ ಮುರ್ಮು ಗೆದ್ದಾಗಿದೆ. ಬುಡಕಟ್ಟು ಜನಾಂಗದ ಹೆಣ್ಣುಮಗಳೊಬ್ಬಳು ಈ ರಾಷ್ಟ್ರದ ಪ್ರಮುಖ ಹುದ್ದೆಗೆ ಏರಿದ್ದಾರೆ. ಎನ್‌ಡಿಎ ಒಕ್ಕೂಟ ಯಾರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರೂ ಅವರು ಗೆಲ್ಲುತ್ತಾರೆಂಬುದೇ ಸ್ಪಷ್ಟವಾಗಿತ್ತು. ಯಾಕೆಂದರೆ ಅಭ್ಯರ್ಥಿ ಗೆಲುವಿಗೆ ಅಗತ್ಯವಿರುವಷ್ಟು ಸಂಸದರು/ಶಾಸಕರ ಬಲ ಎನ್‌ಡಿಎ ಒಕ್ಕೂಟದಲ್ಲೇ ಇದೆ. ಹಾಗಿದ್ದಾಗ್ಯೂ ದ್ರೌಪದಿ ಮುರ್ಮುಗೆ ಪ್ರತಿಪಕ್ಷಗಳ ಹಲವು ಶಾಸಕ/ಸಂಸದರೂ ಮತದಾನ ಮಾಡಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದ್ದು ಸ್ಪಷ್ಟವಾಗಿದ್ದರೂ, ನಿಖರವಾಗಿ ಎಷ್ಟು ಜನ ಮಾಡಿದ್ದಾರೆ ಎಂಬುದು ಗೊತ್ತಾಗಿರಲಿಲ್ಲ. ಈಗ ಅಡ್ಡಮತದಾನ ಮಾಡಿದವರ ಸಂಖ್ಯೆ ನಿಚ್ಚಳವಾಗಿದ್ದು ಒಟ್ಟು 18 ರಾಜ್ಯಗಳ, 17 ಸಂಸದರು ಮತ್ತು 126 ಶಾಸಕರು ಮುರ್ಮುಗೆ ಮತಹಾಕಿದ್ದಾರೆ. ಅಂದರೆ 143 ಅಡ್ಡಮತಗಳು ಬಿದ್ದಿವೆ. (ಇದು ಮತಗಳ ಸಂಖ್ಯೆ. ಮೌಲ್ಯದ ಲೆಕ್ಕಾಚಾರ ಬೇರೆ ಇರುತ್ತದೆ) ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿಯಾದರೂ ಎನ್‌ಡಿಎ ವಿರುದ್ಧ ನಿಲ್ಲಬೇಕು ಎಂದೇ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಿಲಾಗಿತ್ತು. ಆದರೆ ವಿಪಕ್ಷಗಳಲ್ಲಿ ಒಗ್ಗಟ್ಟಿಲ್ಲ ಎಂಬುದು ಈ ಅಡ್ಡಮತದಾನದಿಂದ ಸ್ಪಷ್ಟವಾಗಿದೆ.
ಅಸ್ಸಾಂ, ಜಾರ್ಖಂಡ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ್, ಗೋವಾ, ಗುಜರಾತ್, ಉತ್ತರಪ್ರದೇಶ ಸೇರಿ ಒಟ್ಟು 18 ರಾಜ್ಯಗಳಲ್ಲಿ ಅಡ್ಡಮತದಾನ ನಡೆದಿದೆ. ಪಶ್ಚಿಮ ಬಂಗಾಳದ ಕೆಲವ ಸಂಸದರು/ಶಾಸಕರೂ ಕೂಡ ದ್ರೌಪದಿ ಮುರ್ಮುಗೆ ಮತ ಹಾಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಟಿಎಂಸಿಯ ಇಬ್ಬರು ಸಂಸದರು ಮತ್ತು ಒಬ್ಬ ಶಾಸಕ ಮುರ್ಮುಗೆ ಮತ ಹಾಕಿದ್ದಾರೆ ಎಂದು ಬಿಜೆಪಿಯೇ ಹೇಳಿದೆ. ಅಸ್ಸಾಂನಲ್ಲಿ ಪ್ರತಿಪಕ್ಷಗಳ 22 ಶಾಸಕರು, ಮಧ್ಯಪ್ರದೇಶದಲ್ಲಿ 20, ಬಿಹಾರ ಮತ್ತು ಛತ್ತೀಸ್‌ಗಢ್‌ನಲ್ಲಿ ತಲಾ 6, ಗೋವಾದಲ್ಲಿ ನಾಲ್ಕು ಮತ್ತು ಗುಜರಾತ್‌ನಲ್ಲಿ 10 ಶಾಸಕರು ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ.
ಯಾಕೆ ಹೀಗಾಯ್ತು?
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಡ್ಡಮತದಾನ ಆಗಿದ್ದು ಯಾವ ಕಾರಣಕ್ಕೆ? ಅವರಿಗೆ ಯಶವಂತ್ ಸಿನ್ಹಾ ಬಗ್ಗೆ ಒಲವು ಇರಲಿಲ್ಲವಾ? ಅವರ ಆಯ್ಕೆ ಇಷ್ಟ ಇರಲಿಲ್ಲವಾ? ಎಂಬ ಪ್ರಶ್ನೆ ಏಳುತ್ತದೆ. ಆದರೆ ವಾಸ್ತವ ಏನೆಂದರೆ, ಇಲ್ಲಿ ಯಶವಂತ್ ಸಿನ್ಹಾ ಆಯ್ಕೆಯ ಬಗ್ಗೆ ಸಮಸ್ಯೆ ಇರಲಿಲ್ಲ. ಬದಲಾಗಿ ದ್ರೌಪದಿ ಮುರ್ಮು ಒಬ್ಬ ಬುಡಕಟ್ಟು ಜನಾಂಗದ ಮಹಿಳೆ ಎಂಬುದೇ ಮುಖ್ಯವಾಗಿತ್ತು. ಸಾಮಾನ್ಯವಾಗಿ ಪ್ರತಿಬಾರಿಯೂ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ ಆಗುತ್ತದೆ. ಅಭ್ಯರ್ಥಿಯ ಹಿನ್ನೆಲೆ, ಜಾತಿ, ಜನಾಂಗಗಳೆಲ್ಲ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತವೆ. ಅವರು ಯಾವ ಸಮುದಾಯದವರೋ, ಆ ಸಮುದಾಯಕ್ಕೆ ಸೇರಿದ ಶಾಸಕ/ ಸಂಸದರು ತಮ್ಮ ಪಕ್ಷ ಹೊರತು ಪಡಿಸಿ ತಮ್ಮವರಿಗೇ ಮತ ಹಾಕುತ್ತಾರೆ. ಆದರೆ ದ್ರೌಪದಿ ಮುರ್ಮು ವಿಚಾರದಲ್ಲಿ ತುಸು ವಿಶೇಷತೆಯೆಂದರೆ, ಈ ಬೆಂಬಲ ಅವರಿಗೆ ಒಂದೆರಡು ರಾಜ್ಯಗಳಿಂದಲ್ಲ, 18ರಾಜ್ಯಗಳಿಂದ ಸಿಕ್ಕಿದೆ.
ಜಾರ್ಖಂಡ, ಅಸ್ಸಾಂ, ಬಿಹಾರಗಳೆಲ್ಲ ಬುಡಕಟ್ಟು ಜನಾಂಗದವರೇ ಹೆಚ್ಚಿದ್ದಾರೆ. ಹಾಗಾಗಿ ಅಲ್ಲಿನ ಹಲವರು ತಮ್ಮ ಜನಾಂಗದ ಅಭ್ಯರ್ಥಿಗೇ ವೋಟ್ ಮಾಡಿದ್ದಾರೆ. ಇನ್ನುಳಿದಂತೆ ಉಳಿದ ರಾಜ್ಯಗಳಲ್ಲೂ ಕೂಡ ಇದೇ ವಿಷಯವನ್ನೇ ಪರಿಗಣನೆಯಲ್ಲಿ ಇಟ್ಟುಕೊಂಡು ಮತ ಹಾಕಿದ್ದಾರೆ. ದ್ರೌಪದಿ ಮುರ್ಮು ಸಕ್ರಿಯ ರಾಜಕಾರಣದಲ್ಲಿ ಇದ್ದಾಗಲೂ ಅಜಾತ ಶತ್ರುವಿನಂತೆ ಇದ್ದವರು. ಹೀಗಾಗಿ ಅವರನ್ನು ವಿರೋಧಿಸಲು ಕಾರಣಗಳು ತುಂಬ ಕಡಿಮೆ ಇವೆ.
ಇನ್ನು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಅತ್ಯಂತ ಹೆಚ್ಚು ಬೆಂಬಲ ವ್ಯಕ್ತವಾಗಿದ್ದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಮತ್ತು ಪ್ರತಿಪಕ್ಷ ಟಿಡಿಪಿ ಎರಡೂ ಪಕ್ಷಗಳೂ ದ್ರೌಪದಿ ಮುರ್ಮುಗೆ ಮತ ಹಾಕಿದ್ದಾರೆ. ಈ ಎರಡೂ ಪಕ್ಷಗಳು ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದವು. ಕೇರಳದಲ್ಲಿ ಕೂಡ ಒಂದೆರಡು ಅಡ್ಡಮತದಾನ ಆಗಿದೆ ಎಂದು ವರದಿಯಾಗಿದೆ. ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಜುಲೈ 21ರಂದು ನಡೆದಿತ್ತು. ಸಂಜೆ ಹೊತ್ತಿಗೆ ಫಲಿತಾಂಶ ಹೊರಬಿದ್ದಿದ್ದು, ದ್ರೌಪದಿ ಮುರ್ಮು ವಿಜಯಿ ಎಂದು ಚುನಾವಣಾ ರಿಟರ್ನಿಂಗ್ ಆಫೀಸರ್ ಪಿ.ಸಿ.ಮೋಡಿ ಘೋಷಿಸಿದರು. ದ್ರೌಪದಿ ಮುರ್ಮು ಪಡೆದ ಮತಗಳ ಮೌಲ್ಯ 6,76,803 ಆದರೆ, ಯಶವಂತ್ ಸಿನ್ಹಾ ಗಳಿಸಿದ ಮತಗಳ ಮೌಲ್ಯ 3,80,177. ಅಂದರೆ ದ್ರೌಪದಿ ಮುರ್ಮು, ಒಟ್ಟಾರೆ ಮತದಲ್ಲಿ ಶೇ.64ರಷ್ಟು ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ದ್ರೌಪದಿ ಮುರ್ಮು ಅವರಿಗೆ ಅಡ್ಡ ಮತದಾನ | 2024ರ ಪ್ರತಿಪಕ್ಷ ಒಗ್ಗಟ್ಟು ಮರೀಚಿಕೆ