Site icon Vistara News

ತೆಲಂಗಾಣ ಕಾಂಗ್ರೆಸ್​​ನಲ್ಲಿ ‘ಮೂಲ-ವಲಸೆ’ ಕಾದಾಟ; ಪ್ರದೇಶ ಕಾಂಗ್ರೆಸ್​ ಸಮಿತಿಗೆ ಶಾಸಕಿ ಸೇರಿ 13 ಸದಸ್ಯರ ರಾಜೀನಾಮೆ

Congress

ತೆಲಂಗಾಣ ಕಾಂಗ್ರೆಸ್​​ನಲ್ಲಿ ಆಂತರಿಕ ಕಲಹ ತೀವ್ರಗೊಂಡಿರುವ ಲಕ್ಷಣ ಕಾಣಿಸುತ್ತಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್​ ಸಮಿತಿಯ 13 ಸದಸ್ಯರು ರಾಜೀನಾಮೆ ಕೊಟ್ಟಿದ್ದಾರೆ. ಇಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವುದು ಮೂಲಕ ಕಾಂಗ್ರೆಸ್ಸಿಗರು ಮತ್ತು ತೆಲುಗು ದೇಶಂ ಪಾರ್ಟಿಯಿಂದ ಪಕ್ಷಾಂತರಗೊಂಡು ಬಂದವರ ಮಧ್ಯೆ. ‘ತೆಲಂಗಾಣದಲ್ಲಿ ನಮಗಿಂತಲೂ ಜಾಸ್ತಿ, ಟಿಡಿಪಿಯಿಂದ ಪಕ್ಷಾಂತರಗೊಂಡು ಬಂದವರಿಗೇ ಆದ್ಯತೆ ಹೆಚ್ಚು ಸಿಗುತ್ತಿದೆ’ ಎಂಬುದು ಮೂಲ ಕಾಂಗ್ರೆಸ್ಸಿಗರ ಆರೋಪ.

ಹೀಗಿರುವಾಗ ಇತ್ತೀಚೆಗೆ ಪ್ರದೇಶ ಕಾಂಗ್ರೆಸ್​ ಸಮಿತಿ ರಚನೆ ಮಾಡಲಾಗಿತ್ತು. ಅದರಲ್ಲಿಯೂ ಶೇ.50ರಷ್ಟು ಸದಸ್ಯರಿಗೆ ಟಿಡಿಪಿಯಿಂದ ಪಕ್ಷಾಂತರಗೊಂಡು ಬಂದವರಿಗೇ ಸ್ಥಾನ ಕೊಡಲಾಗಿದೆ. ತೀರ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡವರನ್ನೂ ಪಿಸಿಸಿಗೆ ನೇಮಕ ಮಾಡಲಾಗಿದೆ ಎಂದು ಲೋಕಸಭಾ ಸಂಸದ ಉತ್ತಮ ಕುಮಾರ್​​ ರೆಡ್ಡಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅವಿಭಜಿತ ಆಂಧ್ರಪ್ರದೇಶದ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್​ ನಾಯಕ ದಾಮೋದರ ರಾಜಾನರಸಿಂಹ ಕೂಡ ಅಸಮಾಧಾನಯುಕ್ತ ಮಾತುಗಳನ್ನಾಡಿ, ‘ಹೀಗೆ ವಲಸೆ ಬಂದವರಿಗೇ ಪ್ರಾಮುಖ್ಯತೆ ಸಿಗುತ್ತಿದ್ದರೆ, ಮೂಲ ಕಾಂಗ್ರೆಸ್ಸಿಗರಿಗೆ ಏನು ಸಂದೇಶ ಹೋದಂತಾಗುತ್ತದೆ?’ ಎಂದು ಪ್ರಶ್ನಿಸಿದ್ದರು.

ಹೀಗೆ ಕಾಂಗ್ರೆಸ್​​ನ ಹಿರಿಯ ನಾಯಕರ ಆರೋಪ ಹೆಚ್ಚಾದ ಬೆನ್ನಲ್ಲೇ, 13 ಮಂದಿ ಸದಸ್ಯರು ಪಿಸಿಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇವರೆಲ್ಲರೂ ಟಿಡಿಪಿಯಿಂದ ಬಂದಿದ್ದವರೇ. ಹೀಗೆ ರಾಜೀನಾಮೆ ಕೊಟ್ಟವರಲ್ಲಿ ಕಾಂಗ್ರೆಸ್​​ನ ಶಾಸಕಿ ದಾನಸರಿ ಅನಸೂಯ (ಸೀತಕ್ಕ) ಮತ್ತು ಮಾಜಿ ಶಾಸಕ ವೆಂ ನರೇಂದ್ರ ರೆಡ್ಡಿ ಕೂಡ ಇದ್ದಾರೆ. ಇವರೂ ಕೂಡ ಮೂಲತಃ ಟಿಡಿಪಿಯಲ್ಲೇ ಇದ್ದು, ಐದಾರು ವರ್ಷಗಳ ಹಿಂದೆ ಕಾಂಗ್ರೆಸ್​​ಗೆ ಸೇರಿದ್ದರು.

ಹೀಗೆ ಪಿಸಿಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್​ ನಾಯಕರು ‘ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​​ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಕೆಳಗಿಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ. ಆದರೆ ನಮ್ಮ ಪಕ್ಷದ ಹಿರಿಯ ನಾಯಕರು ನಮ್ಮ ವಿರುದ್ಧವೇ ಆರೋಪ ಮಾಡುತ್ತಾರೆ. ನಾವೂ ಕಳೆದ 6ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಅಸಮಾಧಾನ ತೋರುತ್ತಾರೆ. ಹೀಗಾಗಿ ಎಲ್ಲರೂ ಒಟ್ಟಾಗಿ ರಾಜೀನಾಮೆ ನೀಡುತ್ತೇವೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೋನಿಯಾ ಗಾಂಧಿಯವರ ಮೇಲಿನ ಗೌರವದಿಂದಲೇ ನಾವು ಕಾಂಗ್ರೆಸ್​ಗೆ ಸೇರಿದ್ದು. ಆದರೆ ಇಲ್ಲಿ ಮೂಲ ಕಾಂಗ್ರೆಸ್ಸಿಗರು ನಮ್ಮನ್ನು ತಮ್ಮಲ್ಲಿ ಒಬ್ಬರೆಂದು ಭಾವಿಸುತ್ತಲೇ ಇಲ್ಲ. ಪಕ್ಷ ಬಲವರ್ಧನೆಗೆ ನಮ್ಮನ್ನು ಒಳಗೊಳ್ಳುತ್ತಿಲ್ಲ. ಪದೇಪದೆ ನಮ್ಮನ್ನು ಟಾರ್ಗೆಟ್​ ಮಾಡುತ್ತಾರೆ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಎಲೆಕ್ಷನ್‌ ಹವಾ | ಹೊನ್ನಾಳಿ | ಸದಾ ಸುದ್ದಿಯಲ್ಲಿರುವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಯಾರು?

Exit mobile version