ನವ ದೆಹಲಿ: ಕೇಂದ್ರೀಯ ತನಿಖಾ ದಳಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ಕ್ರಮ ಜರುಗಬೇಕು ಎಂದು ಆಗ್ರಹಿಸಿ 14 ಪ್ರತಿಪಕ್ಷಗಳು (Opposition Parties) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿವೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ, ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಇತರ ತನಿಖಾದಳಗಳನ್ನು ಉಪಯೋಗಿಸಿಕೊಂಡು ಪ್ರತಿಪಕ್ಷಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಈ ಪಕ್ಷಗಳ ನಾಯಕರು ಆರೋಪ ಮಾಡಿದ್ದಾರೆ. ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿದೆ. ಎಲ್ಲ ತನಿಖಾ ದಳಗಳೂ ಸ್ವತಂತ್ರ್ಯವಾಗಿಯೇ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದೆ.
ಅಂದಹಾಗೇ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜನತಾ ದಳ ಯುನೈಟೆಡ್, ಭಾರತ್ ರಾಷ್ಟ್ರ ಸಮಿತಿ, ರಾಷ್ಟ್ರೀಯ ಜನತಾ ದಳ್, ಸಮಾಜವಾದಿ ಪಕ್ಷ, ಶಿವಸೇನಾ (ಉದ್ಧವ್ ಠಾಕ್ರೆ ಬಣ), ನ್ಯಾಷನಲ್ ಕಾನ್ಫರೆನ್ಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಎಡ ಪಕ್ಷಗಳು ಮತ್ತು ಡಿಎಂಕೆ ಸೇರಿ ಒಟ್ಟು 14 ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸಲ್ಲಿಕೆಯಾದ ಅರ್ಜಿಯಲ್ಲಿ ಈ ಎಲ್ಲ ಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ.
ಇದನ್ನೂ ಓದಿ: CJI Chandrachud: ಸಿಜೆಐ ಚಂದ್ರಚೂಡ್ ಕುರಿತು ಟ್ರೋಲ್, ರಾಷ್ಟ್ರಪತಿಗೆ ಪತ್ರ ಬರೆದ ಪ್ರತಿಪಕ್ಷಗಳು
ಬಿಜೆಪಿ ಸರ್ಕಾರ ಕೇಂದ್ರೀಯ ತನಿಖಾ ದಳಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಮೊದಲಿನಿಂದಲೂ ಪ್ರತಿಪಕ್ಷಗಳು ಮಾಡಿಕೊಂಡೇ ಬಂದಿವೆ. ಇತ್ತೀಚೆಗೆ 9ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದಿದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷಗಳ ಹಲವು ರಾಜಕಾರಣಿಗಳ ಮೇಲೆ ಸಿಬಿಐ, ಇಡಿ, ಐಟಿ ದಾಳಿಯಾಗಿದೆ. ವಿಪಕ್ಷಗಳ ನಾಯಕರು ಬಂಧನಕ್ಕೆ ಒಳಗಾಗುತ್ತಿದ್ದಾರೆ. ಆದರೆ ಬೇರೆ ವಿವಿಧ ಪಕ್ಷಗಳಲ್ಲಿದ್ದು ಬಳಿಕ ಬಿಜೆಪಿಗೆ ಸೇರಿದವರು ಭ್ರಷ್ಟರಾಗಿದ್ದರೂ, ಆ ವಿಷಯ ಗೊತ್ತಿದ್ದರೂ ತನಿಖಾ ದಳಗಳು ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ದೇಶದಲ್ಲಿ ಹಲವು ರಾಜ್ಯಗಳಲ್ಲಿ ರಾಜ್ಯಪಾಲರೂ ಕೂಡ ಅವರ ಮಿತಿಗಳನ್ನು ಉಲ್ಲಂಘಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರೂ ಸಹ ಉದ್ದೇಶಪೂರ್ವಕವಾಗಿ, ಚುನಾಯಿತ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಅದೂ ಕೂಡ ಬಿಜೆಪಿಯೇತರ ಸರ್ಕಾರ ಇರುವ ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್, ತೆಲಂಗಾಣ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ಗಳು ಈಗಾಗಲೇ ಹಲವು ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಕಂದಕವನ್ನು ಹೆಚ್ಚಿಸುತ್ತಿದ್ದಾರೆ ಎಂದೂ ಪತ್ರದಲ್ಲಿ ಬರೆದಿದ್ದರು.