ಚೆನ್ನೈ: ಜಲ್ಲಿಕಟ್ಟು ಕ್ರೀಡೆ ನೋಡಲು ತನ್ನ ಸಂಬಂಧಿಕರೊಂದಿಗೆ ಹೋಗಿದ್ದ 14 ವರ್ಷದ ಬಾಲಕನಿಗೆ ಹೋರಿಯೊಂದು ತಿವಿದು, ಆತ ದಾರುಣವಾಗಿ ಮೃತಪಟ್ಟಿದ್ದಾನೆ. ತಮಿಳುನಾಡಿನ ಧರ್ಮಪುರಿಯ ತಾಡನಾಗಂ ಎಂಬ ಹಳ್ಳಿಯಲ್ಲಿ ಜಲ್ಲಿಕಟ್ಟು ಕ್ರೀಡೆ ಆಯೋಜಿಸಲಾಗಿತ್ತು. 14 ವರ್ಷದ ಬಾಲಕ ಗೋಕುಲ್ ಅತ್ಯುತ್ಸಾಹದಲ್ಲಿ ಆಟ ನೋಡಲು ಹೋಗಿ ನಿಂತಿದ್ದ. ಆದರೆ ಜಲ್ಲಿಕಟ್ಟು ಆಟದಲ್ಲಿ ಬೆದರಿ ಓಡುತ್ತಿದ್ದ ಹೋರಿಯೊಂದು ಗೋಕುಲ್ ಹೊಟ್ಟೆಗೇ ತಿವಿದಿದೆ. ಕೂಡಲೇ ಬಾಲಕನನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಆತ ಪ್ರಾಣಬಿಟ್ಟಿದ್ದ.
ಹೋರಿಗಳನ್ನು ಬೆದರಿಸಿ ಓಡಿಸುವ ಈ ಜಲ್ಲಿಕಟ್ಟು ಅಪಾಯಕಾರಿಯಾದರೂ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ಹಲವು ಭಾಗಗಳಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭಗಳಲ್ಲಿ ಈ ಆಟ ನಡೆದೇ ನಡೆಯುತ್ತದೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿಗಳ ದಾಳಿಗೆ ಜೀವ ತೆತ್ತವರು ಅದೆಷ್ಟೋ ಮಂದಿ. ಈ ವರ್ಷವೇ ಈಗ ಗೋಕುಲ್ ಸೇರಿ ಇಲ್ಲಿಯವರೆಗೆ ನಾಲ್ವರ ಸಾವಾಗಿದೆ. ಸದ್ಯ ಗೋಕುಲ್ ಸಾವಿನ ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಆತ ಗಾಯಗೊಂಡಿದ್ದು ಯಾವ ಕ್ಷಣದಲ್ಲಿ ಎಂಬುದನ್ನು ಪರಿಶೀಲಿಸಲು ಸಿಸಿಟಿವಿ ಫೂಟೇಜ್ಗಳನ್ನೂ ವಶಪಡಿಸಿಕೊಂಡಿದ್ದಾರೆ.
ಜಲ್ಲಿಕಟ್ಟು ಒಂದು ಸಾಂಪ್ರದಾಯಿಕ ಕ್ರೀಡೆ ಎಂಬ ಹೆಸರು ಪಡೆದಿದೆ. ಜಲ್ಲಿಕಟ್ಟುವಿಗಾಗಿಯೇ ಹೋರಿಗಳನ್ನು ದಷ್ಪಪುಷ್ಟವಾಗಿ ಬೆಳೆಸಿ, ಪಳಗಿಸಲಾಗುತ್ತದೆ. ಕ್ರೀಡೆಯ ದಿನ ನೆರೆದಿದ್ದ ಜನಸ್ತೋಮದ ಮಧ್ಯೆಯೇ ಹೋರಿಗಳನ್ನು ಬಿಡಲಾಗುತ್ತದೆ. ಹೀಗೆ ಹುಚ್ಚೆದ್ದು ಓಡುವ ಹೋರಿಯ, ಬೆನ್ನಿನ ಮೇಲಿನ ಉಬ್ಬಿದ ಭಾಗವನ್ನು ಹಿಡಿದು ಅದನ್ನು ನಿಲ್ಲಿಸುವವನೇ ವಿಜಯಶಾಲಿ ಎಂದು ಪರಿಗಣನೆಯಾಗುತ್ತದೆ. ಆದರೆ ಇದು ಅಷ್ಟು ಸುಲಭವೂ ಅಲ್ಲ. ಈ ಹಿಂದೆ ಹಲವು ಬಾರಿ ಜಲ್ಲಿಕಟ್ಟು ನಿಷೇಧವಾಗಿತ್ತು. ಆದರೆ ನೆಲದ ಸಂಪ್ರದಾಯ ಎಂಬ ವಾದವೇ ಗಟ್ಟಿಯಾಗಿ, 2017ರಲ್ಲಿ ಮತ್ತೆ ಕ್ರೀಡೆಯನ್ನು ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈಗ ಮತ್ತೆ ಪ್ರಾಣಿ ದಯಾ ಸಂಘದವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.