ನಮ್ಮ ದೇಶಕ್ಕೆ 26/11 ಎಂಬ ದಿನಾಂಕ ಒಂದು ಕಪ್ಪುಚುಕ್ಕೆಯಂತಾಗಿದೆ. ಕರಾಳ ಇತಿಹಾಸದ ಸಾಲಿಗೆ ಸೇರಿದೆ. 2008ರ ನವೆಂಬರ್ 26ರಂದು ಮುಂಬಯಿಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ, ಒಬೆರಾಯ್ ಟ್ರೈಡೆಂಟ್, ತಾಜ್ ಪ್ಯಾಲೇಸ್ ಹೋಟೆಲ್ ಮತ್ತು ಟವರ್ ಸೇರಿ 12 ಪ್ರದೇಶಗಳ ಮೇಲೆ ಲಷ್ಕರೆ ತೊಯ್ಬಾ ಉಗ್ರರು ಭೀಕರ ದಾಳಿ ನಡೆಸಿದ್ದರು. ಸಮುದ್ರ ಮಾರ್ಗದ ಮೂಲಕ ಬಂದಿದ್ದ 10 ಉಗ್ರರು ನಡೆಸಿದ್ದ ದಾಳಿಯಲ್ಲಿ ಭಾರತದ ಭದ್ರತಾ ಸಿಬ್ಬಂದಿ, ನಾಗರಿಕರು, ವಿದೇಶಿ ಪ್ರವಾಸಿಗರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಾಗೇ, ನಮ್ಮ ಭದ್ರತಾ ಪಡೆಗಳ ದಾಳಿಗೆ 9 ದಾಳಿಕೋರರು ಬಲಿಯಾಗಿದ್ದಾರೆ. ಮತ್ತೊಬ್ಬ ಉಗ್ರನನ್ನು ಹಿಡಿದು ಗಲ್ಲಿಗೇರಿಸಲಾಯಿತು.
ನವೆಂಬರ್ 26ರಂದು ದಾಳಿ ನಡೆಸಿದ್ದ ಉಗ್ರರು ಹಲವು ನಾಗರಿಕರನ್ನು ತಾಜ್ ಹೊಟೆಲ್ನಲ್ಲಿ ನವೆಂಬರ್ 29ರವರೆಗೆ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ನವೆಂಬರ್ 29ರಂದು ರಾಷ್ಟ್ರೀಯ ಭದ್ರತಾ ಪಡೆಗಳು Operation Tornado (ಆಪರೇಶನ್ ಟೊರ್ನಾಡೋ) ಕಾರ್ಯಾಚರಣೆ ನಡೆಸಿ, ಉಗ್ರರನ್ನು ಹತ್ಯೆಗೈದಿದ್ದರು. ಈ ದಾಳಿಯ ಮುಖ್ಯ ರೂವಾರಿ ಅಜ್ಮಲ್ ಕಸಬ್ನನ್ನು ಸೆರೆ ಹಿಡಿಯಲಾಗಿತ್ತು ಆತನನ್ನು 2012ರ ನವೆಂಬರ್ 21ರಂದು ಗಲ್ಲಿಗೇರಿಸಲಾಗಿದೆ.
2008ರ ನವೆಂಬರ್ 26ರಿಂದ ಏನೆಲ್ಲ ಆಯ್ತು?
ಪಾಕಿಸ್ತಾನದ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ 10 ಉಗ್ರರು ನವೆಂಬರ್ 26ರಂದು ಕರಾಚಿಯಿಂದ ಸ್ಪೀಡ್ಬೋಟ್ನಲ್ಲಿ ಮುಂಬಯಿ ಕರಾವಳಿಗೆ ತಲುಪಿದ್ದರು. ಇಬ್ಬರು ಟ್ರಿಡೆಂಟ್ಗೆ ಪ್ರವೇಶ ಮಾಡಿದರು. ಮತ್ತಿಬ್ಬರು ತಾಜ್ ಹೋಟೆಲ್ ಪ್ರವೇಶ ಮಾಡಿದರು. ನಾಲ್ವರು ನಾರಿಮನ್ ಹೌಸ್ಗೆ ಹೋಗಿ ದಾಳಿ ಮಾಡಿದರು. ಕಸಬ್ ಮತ್ತು ಇನ್ನೊಬ್ಬ ಉಗ್ರ ಇಸ್ಮಾಯಿಲ್ ಖಾನ್ ಇಬ್ಬರೂ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು. ಅಷ್ಟೇ ಅಲ್ಲ, ಇವರ ವಿರುದ್ಧ ಹೋರಾಟಕ್ಕೆ ಇಳಿದಿದ್ದ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಉಗ್ರ ನಿಗ್ರಹ ಘಟಕದ ಮುಖ್ಯಸ್ಥ ಹೇಮಂತ್ ಕರ್ಕರೆ ಸೇರಿ ಆರು ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದರು.
ತಾಜ್ ಹೋಟೆಲ್ ಅಂತೂ ಉಗ್ರರ ದಾಳಿಗೆ ನಲುಗಿತ್ತು. ಗುಂಡು, ಬಾಂಬ್ ದಾಳಿಯಿಂದಾಗಿ ದಟ್ಟನೆಯ ಕಪ್ಪು ಹೊಗೆ ಸ್ಥಳದಲ್ಲಿ ಆವರಿಸಿತ್ತು. ಅಷ್ಟರಲ್ಲಿ, ಅಬ್ದುಲ್ ರೆಹಮಾನ್ ಬಾಡಾ ಮತ್ತು ಅಬು ಅಲಿ ಎಂಬ ಉಗ್ರರು ಪೊಲೀಸ್ ಪೋಸ್ಟ್ಗೆ ಹೋಗಿ, ಅದರ ಮುಖ್ಯದ್ವಾರದಲ್ಲಿ ಕಚ್ಚಾ ಆರ್ಡಿಎಕ್ಸ್ ಬಾಂಬ್ ಅಳವಡಿಸಿದರು. ಅವರಿಬ್ಬರ ಕೈಯಲ್ಲೂ ಎಕೆ 47 ಇತ್ತು. ಅದರಿಂದ ಒಂದೇ ಸಮನೆ ಗುಂಡು ಹಾರುತ್ತಿತ್ತು.
ಇನ್ನಿಬ್ಬರು ಉಗ್ರರಾದ ಶೋಯೇಬ್ ಮತ್ತು ಉಮರ್, ತಾಜ್ ಹೋಟೆಲ್ನ್ನು ಇನ್ನೊಂದು ಬಾಗಿಲಿನ ಮೂಲಕ ಪ್ರವೇಶಿಸಿ, ಅದರಲ್ಲಿ ಉಳಿದುಕೊಂಡಿದ್ದವರ ಮೇಲೆ ಗುಂಡು ಹಾರಿಸತೊಡಗಿದರು. ಇವರ ಬುಲೆಟ್ ದಾಳಿಗೆ ಹೋಟೆಲ್ನಲ್ಲಿದ್ದ ನಾಲ್ವರು ವಿದೇಶಿ ಅತಿಥಿಗಳು ಬಲಿಯಾದರು. ಹೋಟೆಲ್ ಸೆಕ್ಯೂರಿಟಿ ಗಾರ್ಡ್ ರವೀಂದ್ರ ಕುಮಾರ್ ಮೃತರಾದರು. ಅವರ ಜತೆಗಿದ್ದ ಲ್ಯಾಬ್ರಡಾರ್ ಶ್ವಾನವೂ ಬಲಿಯಾಯಿತು. ಹೋಟೆಲ್ನಲ್ಲಿದ್ದ ಅತಿಥಿಗಳನ್ನು ಉಗ್ರರು ಒಂದು ಸಣ್ಣ ಕೋಣೆಯಲ್ಲಿ ಬಂಧಿಸಿಟ್ಟಿದ್ದರು. ಆ ಹೋಟೆಲ್ನ್ನು ಭದ್ರತಾ ಸಿಬ್ಬಂದಿ, ಪೊಲೀಸರು ಸುತ್ತುವರಿದಿದ್ದರು.
ನವೆಂಬರ್ 28ರ ಹೊತ್ತಿಗೆ ಟ್ರಿಡೆಂಟ್ ಮತ್ತು ನಾರಿಮನ್ ಹೌಸ್ಗಳಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಕ್ತಾಯವಾಗಿತ್ತು. ನವೆಂಬರ್ 29ರಂದು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ತಾಜ್ ಹೋಟೆಲ್ನ್ನು ಸುತ್ತುವರಿದರು. ಅದರೊಳಗೆ ಅಡಗಿದ್ದ 9 ಉಗ್ರರನ್ನು ಕೊಂದು, ಒತ್ತೆಯಾಳಾಗಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಲಾಯಿತು. ಈ ವೇಳೆ ಕಮಾಂಡೋ ಸುನೀಲ್ ಯಾದವ್ರನ್ನು ರಕ್ಷಿಸಲು ಹೋದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದರು. ಹಾಗೇ, ನಾರಿಮನ್ ಹೌಸ್ನಲ್ಲಿ ಉಗ್ರರ ವಿರುದ್ಧ ಸುದೀರ್ಘವಾಗಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಎನ್ಸಿಜಿ ಕಮಾಂಡೋ ಗಜೇಂದ್ರ ಸಿಂಗ್ ಬಿಷ್ಟ್ ಮೃತಪಟ್ಟರು. ಅಂತಿಮವಾಗಿ ನಮ್ಮ ವೀರ ಯೋಧರು ಎಲ್ಲ 9 ಉಗ್ರರನ್ನು ಹತ್ಯೆಗೈದರು.
ಮುಂಬಯಿ ದಾಳಿ ನೆನಪಿಸಿಕೊಂಡ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು
ಮುಂಬಯಿ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಅಂದು ಉಗ್ರರ ದಾಳಿಗೆ ಮೃತಪಟ್ಟ ಭದ್ರತಾ ಸಿಬ್ಬಂದಿ, ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು ಸುಪ್ರಿಂಕೋರ್ಟ್ನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಮುಂಬಯಿಯಲ್ಲಿ ನಡೆದ ಭೀಕರ ಉಗ್ರದಾಳಿಗೆ ಇಂದು 14 ವರ್ಷ. ಹದಿನಾಲ್ಕು ವರ್ಷಗಳ ಹಿಂದೆ ಭಾರತ ತನ್ನ ಸಂವಿಧಾನ ದಿನ ಮತ್ತು ಪೌರರ ಹಕ್ಕುಗಳ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಮನುಕುಲದ ವೈರಿಗಳಾದ ಭಯೋತ್ಪಾದಕರು ಅತಿದೊಡ್ಡ ಮಟ್ಟದ ದಾಳಿ ನಡೆಸಿದರು. ಅಂದಿನ ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ಶ್ರದ್ಧಾಂಜಲಿ’ ಎಂದು ಹೇಳಿದರು.
ಟ್ವೀಟ್ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಮುಂಬಯಿ ದಾಳಿಯಲ್ಲಿ ಮಡಿದವರನ್ನು ನಾವಿಂದು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತಿದ್ದೇವೆ. ಅಂದು ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ನಾವೂ ಭಾಗಿಯಾಗುತ್ತೇವೆ. ಮುಂಬಯಿ ದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಟ ಮಾಡಿ, ಜೀವವನ್ನೇ ತ್ಯಾಗ ಮಾಡಿದವರಿಗೆ ಇಡೀ ರಾಷ್ಟ್ರ ಋಣಿಯಾಗಿರುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: ಗುಜರಾತ್, ಉತ್ತರಪ್ರದೇಶ, ಮುಂಬಯಿ, ದಿಲ್ಲಿಯಲ್ಲಿ ಆಲ್-ಖೈದಾ ಆತ್ಮಾಹುತಿ ದಾಳಿ ಬೆದರಿಕೆ