Site icon Vistara News

ಚಿತ್ತೂರಿನಲ್ಲಿ ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿಗಳ ಅಬ್ಬರ; ಗಾಯಗೊಂಡು ಆಸ್ಪತ್ರೆ ಸೇರಿದ 15 ಯುವಕರು

Jallikattu competition like IPL in Tamil Nadu!

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಪೊಂಗಲ್ ಹಬ್ಬದ (ಮಕರ ಸಂಕ್ರಾಂತಿ ಹಬ್ಬ) ನಿಮಿತ್ತ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಈ ಭಾಗದಲ್ಲಿ ನಡೆಸುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿನಲ್ಲಿ ಹೋರಿಗಳನ್ನು ಬೆದರಿಸಿ ಓಡಿಸಲಾಗುತ್ತದೆ. ಇದೊಂದು ಅಪಾಯಕಾರಿ ಕ್ರೀಡೆಯಾಗಿದ್ದು, ಈಗಾಗಲೇ ಅನೇಕರ ಪ್ರಾಣ ತೆಗೆದಿದೆ. ಆದರೆ ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಜಲ್ಲಿಕಟ್ಟು ವೈಭವ ಸ್ವಲ್ಪವೂ ಕಡಿಮೆಯಾಗಿಲ್ಲ. ಜ.14ರಂದು ಕೂಡ ಚಿತ್ತೂರಿನಲ್ಲಿ ಭರ್ಜರಿಯಾಗಿಯೇ ನಡೆಯಿತು. ಹಲವು ಯುವಕರು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಆದರೆ 15 ಮಂದಿ ಗಾಯಗೊಂಡಿದ್ದು, ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಮಿಳುನಾಡಿನಲ್ಲಿ ಪ್ರಾಮುಖ್ಯತೆ ಪಡೆದಿರುವ ಜಲ್ಲಿಕಟ್ಟು ಕ್ರೀಡೆ, ಆಂಧ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲೂ ನಡೆಯುತ್ತದೆ. ಪ್ರತಿವರ್ಷ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಇದರ ಆಚರಣೆ. ಜಲ್ಲಿಕಟ್ಟುವಿಗಾಗಿಯೇ ಹೋರಿಗಳನ್ನು ದಷ್ಪಪುಷ್ಟವಾಗಿ ಬೆಳೆಸಿ, ಪಳಗಿಸಲಾಗುತ್ತದೆ. ಕ್ರೀಡೆಯ ದಿನ ನೆರೆದಿದ್ದ ಜನಸ್ತೋಮದ ಮಧ್ಯೆಯೇ ಹೋರಿಗಳನ್ನು ಬಿಡಲಾಗುತ್ತದೆ. ಹೀಗೆ ಹುಚ್ಚೆದ್ದು ಓಡುವ ಹೋರಿಯ, ಬೆನ್ನಿನ ಮೇಲಿನ ಉಬ್ಬಿದ ಭಾಗವನ್ನು ಹಿಡಿದು ಅದನ್ನು ನಿಲ್ಲಿಸುವವನೇ ವಿಜಯಶಾಲಿ ಎಂದು ಪರಿಗಣನೆಯಾಗುತ್ತದೆ. ಆದರೆ ಇದು ಅಷ್ಟು ಸುಲಭವೂ ಅಲ್ಲ. ಈ ಹಿಂದೆ ಹಲವು ಬಾರಿ ಜಲ್ಲಿಕಟ್ಟು ನಿಷೇಧವಾಗಿತ್ತು. ಆದರೆ ನೆಲದ ಸಂಪ್ರದಾಯ ಎಂಬ ವಾದವೇ ಗಟ್ಟಿಯಾಗಿ, 2017ರಲ್ಲಿ ಮತ್ತೆ ಕ್ರೀಡೆಯನ್ನು ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಈಗ ಮತ್ತೆ ಪ್ರಾಣಿ ದಯಾ ಸಂಘದವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: Buffalo race | ಕಂಬಳ, ಜಲ್ಲಿಕಟ್ಟುವಿಗೆ ಅವಕಾಶ ನೀಡಿದ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Exit mobile version