ನವದೆಹಲಿ: ದೇಶದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ, ಕೊರೊನಾ ಸಾಂಕ್ರಾಮಿಕವೂ ಮತ್ತೆ ಹೆಚ್ಚುತ್ತಿದೆ. ಈಗೊಂದು ವಾರದಿಂದ ಪ್ರತಿದಿನ ದಾಖಲಾಗುವ ಕೊರೊನಾ ಕೇಸ್ಗಳ ಸಂಖ್ಯೆ (Covid-19 Cases) ಏರಿಕೆಯಾಗುತ್ತಿದೆ. 24ಗಂಟೆಯಲ್ಲಿ 1590 ಕೊರೊನಾ ಕೇಸ್ಗಳು ದಾಖಲಾಗಿದ್ದು, ಇದು ಕಳೆದ 146 ದಿನಗಳಲ್ಲೇ ಗರಿಷ್ಠ ಮಟ್ಟದ ಹೆಚ್ಚಳ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಾಗೇ, 24ಗಂಟೆಯಲ್ಲಿ 910 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯೀಗ 8601ಕ್ಕೆ ತಲುಪಿದೆ.
ಇಂದು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 6. ಮಹಾರಾಷ್ಟ್ರದಲ್ಲಿ ಮೂವರು, ಕರ್ನಾಟಕ, ರಾಜಸ್ಥಾನ ಮತ್ತು ಉತ್ತರಾಖಂಡ್ನಲ್ಲಿ ತಲಾ ಒಬ್ಬರು ಕೊವಿಡ್ನಿಂದ ಮೃತಪಟ್ಟಿದ್ದಾರೆ. ಅಲ್ಲಿಗೆ ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 5,30,824. ಇನ್ನು ದೈನಂದಿನ ಪಾಸಿಟಿವಿಟಿ ರೇಟ್ 1.33ರಷ್ಟಿದ್ದು, ವಾರದ ಪಾಸಿಟಿವಿಟಿ ಪ್ರಮಾಣ 1.23ರಷ್ಟಿದೆ.
2020ರಲ್ಲಿ ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ 4,47,02,257 ಜನರು ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಚೇತರಿಸಿಕೊಂಡವರು 4,41,62,832. ಸದ್ಯ ದೇಶದಲ್ಲಿ ಕೊರೊನಾ ರಿಕವರಿ ರೇಟ್ ಶೇ.98.79ರಷ್ಟಿದೆ. ಮರಣ ಪ್ರಮಾಣ ಶೇ.1.19 ಇದೆ. ಇನ್ನೊಂದೆಡೆ ಲಸಿಕೀಕರಣ ಕೂಡ ನಡೆಯುತ್ತಿದೆ. ಇದುವರೆಗೆ 220.65 ಕೋಟಿ ಜನರು ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಹಾಗೇ. 24ಗಂಟೆಯಲ್ಲಿ 1,19,560 ಮಂದಿಗೆ ಕೊವಿಡ್ 19 ತಪಾಸಣೆ ಮಾಡಲಾಗಿದೆ. ಅಲ್ಲಿಗೆ ಒಟ್ಟಾರೆ ಪರೀಕ್ಷೆಗೆ ಒಳಗಾದವರ ಸಂಖ್ಯೆ 92.08 ತಲುಪಿದೆ.
ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ
ಹೀಗೆ ಪ್ರತಿನಿತ್ಯ ಕೊವಿಡ್ 19 ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇದೀಗ ದೇಶದಲ್ಲಿ ಕೊರೊನಾ ಹೆಚ್ಚಾಗಲು ಒಮಿಕ್ರಾನ್ನ ಉಪತಳಿ XBB.1.16 ಕಾರಣವಾಗಿರಬಹುದು. ಆದರೆ ಇದು ತೀವ್ರತರವಾಗಿಲ್ಲ. ಮರಣ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರ ಕಡಿಮೆಯಿದೆ ಎಂದೂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹಾಗೇ, ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಶನ್ ಮತ್ತು ಕೊವಿಡ್ ಸೂಕ್ತವಾದ ನಡುವಳಿಕೆ (ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ) ಎಂಬ ಐದು ಹಂತದ ಕೊವಿಡ್ 19 ನಿಯಂತ್ರಣ ಕಾರ್ಯತಂತ್ರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.