ಮುಂಬಯಿ: ಏಪ್ರಿಲ್ 30ರೊಳಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman khan)ಅವರನ್ನು ಕೊಲ್ಲುವುದಾಗಿ ಮುಂಬಯಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ, ತನ್ನನ್ನು ತಾನು ರಾಕಿ ಭಾಯ್ ಎಂದು ಹೇಳಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಈತ 16ವರ್ಷದ ಹುಡುಗನಾಗಿದ್ದು, ಥಾಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಹುಡುಗ ರಾಜಸ್ಥಾನದ ಜೋಧ್ಪುರ ನಿವಾಸಿ. ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ ಇವನ ನಂಬರ್ನ್ನು ಟ್ರ್ಯಾಕ್ ಮಾಡಲಾಗಿತ್ತು. ಆಗ ಆತ ಥಾಣೆ ಜಿಲ್ಲೆಯ ಶಹಾಪುರದಿಂದ ಕರೆ ಮಾಡಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮುಂಬಯಿ ಪೊಲೀಸ್ ‘ಕರೆ ಮಾಡಿದವನು ಅಪ್ರಾಪ್ತ ವಯಸ್ಸಿನ ಬಾಲಕ. ಇದು ಗಂಭೀರವಾದ ಕರೆಯಾಗಿರಲಿಲ್ಲ. ಸುಮ್ಮನೆ ಮಾಡಿದ್ದ. ಆದರೂ ಆತ ಯಾಕಾಗಿ ಹೀಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಮಾರ್ಚ್ 18ರಂದು ಕೂಡ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಕರೆ ಬಂದಿತ್ತು. ನಟನನ್ನು ಕೊಲ್ಲುವುದಾಗಿ ಅವರ ಪರಿಚಿತರೊಬ್ಬರಿಗೆ ಇಮೇಲ್ ಸಂದೇಶ ಬಂದಿತ್ತು. ಸಲ್ಮಾನ್ ಖಾನ್ಗೆ ಈಗಾಗಲೇ ವೈ ಪ್ಲಸ್ ಭದ್ರತೆ ಇದೆ. ಇತ್ತೀಚೆಗೆ ಅವರು ಬುಲೆಟ್ ಪ್ರೂಫ್ ನಿಸಾನ್ ಪಾಟ್ರೋಲ್ ಎಸ್ಯುವಿ ಕಾರನ್ನು ಖರೀದಿಸಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಪ್ರಮೋಶನ್ನಲ್ಲಿ ತೊಡಗಿರುವ ಅವರು ತಮ್ಮ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಇನ್ನು ಮುಂಬಯಿ ಕಂಟ್ರೋಲ್ ರೂಮ್ಗೆ ಜೀವ ಬೆದರಿಕೆ ಕರೆ ಬರುತ್ತಿದ್ದಂತೆ ಸಲ್ಮಾನ್ ಖಾನ್ ಮನೆಯ ಬಳಿ ಸೆಕ್ಯೂರಿಟಿ ಇನ್ನಷ್ಟು ಹೆಚ್ಚಿಸಲಾಗಿತ್ತು.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್‌ನನ್ನು ಕೊಂದೇ ತೀರುತ್ತೇನೆ, ನನ್ನ ಜೀವನದ ಗುರಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್
ಸಲ್ಮಾನ್ ಖಾನ್ ಅವರು 1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಟಿದ್ದಾರೆ. ಆದರೆ, ಬಿಷ್ಣೋಯಿ ಸಮುದಾಯದವರು ಪ್ರಕೃತಿ ಆರಾಧಕರಾಗಿದ್ದು, ಕೃಷ್ಣಮೃಗವನ್ನು ಅವರು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದೇ ಭಾವಿಸುತ್ತಾರೆ. ಹಾಗಾಗಿ, ಸಲ್ಮಾನ್ ಖಾನ್ ವಿರುದ್ಧ ಇದೇ ಸಮುದಾಯದ ಗ್ಯಾಂಗ್ಸ್ಟರ್ಗಳು ಬೆನ್ನುಬಿದ್ದಿದ್ದಾರೆ. ವರ್ಷದ ಹಿಂದೆಯೂ ಕೂಡ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಲಾಗಿತ್ತು. ಪಂಜಾಬ್ ಗಾಯಕ ಸಿಧು ಮೂಸೇವಾಲಾಗೆ ಆದ ಗತಿಯೇ ನಿನಗೂ ಆಗುತ್ತದೆ ನೋಡು ಎಂದು ಹೇಳಲಾಗಿತ್ತು.