ಲಖನೌ: ಕಳೆದ ಐದು ವರ್ಷಗಳಲ್ಲಿ ಪೊಲೀಸ್ ಶೂಟೌಟ್ನಿಂದ 166 ಕ್ರಿಮಿನಲ್ಗಳು ಮೃತಪಟ್ಟಿದ್ದಾರೆ ಮತ್ತು 4453 ಕ್ರಿಮಿನಲ್ಗಳು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಕ್ರಿಮಿನಲ್ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಿ ಕ್ರಿಮಿನಲ್ಗಳ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡುವ ಕೆಲಸವೂ ನಡೆಯುತ್ತಿದೆ. ತಪ್ಪಿಸಿಕೊಳ್ಳಲು ಯತ್ನಿಸಿದರೆ, ಪೊಲೀಸರ ಮೇಲೆ ದಾಳಿಗೆ ಪ್ರಯತ್ನಿಸಿದರೆ ಶೂಟೌಟ್ ಪಕ್ಕಾ. ಹೀಗಾಗಿ ಕೆಲವು ದುಷ್ಕರ್ಮಿಗಳಂತೂ ತಾವೇ ಬಂದು ಶರಣಾಗುತ್ತಿದ್ದಾರೆ.
ಲಖನೌದಲ್ಲಿ ನಡೆದ ಪೊಲೀಸ್ ಸ್ಮಾರಕ ದಿನ ಪರೇಡ್ನಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ‘ಅಪರಾಧ ಕೃತ್ಯಗಳ ವಿಚಾರದಲ್ಲಿ ನಮ್ಮ ಸರ್ಕಾರದ್ದು ಶೂನ್ಯ ಸಹಿಷ್ಣುತಾ ನೀತಿ. ಕ್ರಿಮಿನಲ್ಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರು ಒಂದೋ ಜೈಲಿನಲ್ಲಿ ಇರಬೇಕು..ಇಲ್ಲವೇ ಸಾಯಬೇಕು’ ಎಂದು ಹೇಳಿದ್ದಾರೆ. ಹಾಗೇ, ಕಳೆದ ಐದು ವರ್ಷಗಳಲ್ಲಿ ಇಂಥ ಕ್ರಿಮಿನಲ್ಗಳ ವಿರುದ್ಧದ ಹೋರಾಟದಲ್ಲಿ 13 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ’ ಎಂದೂ ಸಿಎಂ ಯೋಗಿ ಮಾಹಿತಿ ನೀಡಿದ್ದಾರೆ.
ಇನ್ನು ಮೃತ ಪೊಲೀಸ್ ಸಿಬ್ಬಂದಿ ಕುಟುಂಬದವರಿಗೆ ಯೋಗಿ ಆದಿತ್ಯನಾಥ್ ಭರವಸೆ ನೀಡಿ, ಅವರ ಎಲ್ಲ ಅಗತ್ಯತೆಗಳನ್ನೂ ಪೂರೈಸುವುದಾಗಿ ಹೇಳಿದ್ದಾರೆ. ನಮ್ಮ ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಅವರಿಗೆ ಮಾತು ಕೊಟ್ಟಿದ್ದಾರೆ. ಅದರೊಂದಿಗೆ ಈಗ ಕರ್ತವ್ಯದಲ್ಲಿರುವ ಪೊಲೀಸರಿಗೆ 500 ರೂಪಾಯಿ ದ್ವಿಚಕ್ರ ವಾಹನ ಭತ್ಯೆ, ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ (Field Duty)ಸಿಬ್ಬಂದಿಗಾಗಿ ಸಿಮ್ ಕಾರ್ಡ್ ಭತ್ಯೆಯಾಗಿ ವಾರ್ಷಿಕ 2 ಸಾವಿರ ರೂಪಾಯಿ ನೀಡುವುದಾಗಿಯೂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಪೊಲೀಸ್ ಇಲಾಖೆಯ ಅಭಿವೃದ್ಧಿಗಾಗಿ ಸಿಎಂ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾರೆ. ಬಜೆಟ್ನಲ್ಲಿ ಕೂಡ ಹೆಚ್ಚೆಚ್ಚು ಅನುದಾನ ಮೀಸಲಿಡುತ್ತಿದ್ದಾರೆ. 2017-2018ರಲ್ಲಿ ಪೊಲೀಸ್ ಫೋರ್ಸ್ಗಾಗಿ ಬಜೆಟ್ನಲ್ಲಿ 16115 ಕೋಟಿ ರೂ. ಮೀಸಲಿಡಲಾಗಿತ್ತು. ಅದೇ 2021-22ರಲ್ಲಿ 30,203 ಕೋಟಿ ರೂ. ನೀಡಲಾಗಿದೆ.
ಇದನ್ನೂ ಓದಿ: Terror Attack | ಶೋಪಿಯಾನ್ನಲ್ಲಿ ನಿಲ್ಲದ ಉಗ್ರರ ದಾಳಿ; ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿ