ನವ ದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ಮುಂಜಾನೆ 8ಗಂಟೆಯಿಂದ ನಡೆಯುತ್ತಿದ್ದು, ಬೆಳಗ್ಗೆ 11ಗಂಟೆ ಹೊತ್ತಿಗೆ ಶೇ.17.98ರಷ್ಟು ಮತದಾನವಾಗಿದೆ. 68 ಕ್ಷೇತ್ರಗಳಿಂದ 412 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 50 ಲಕ್ಷ ಮತದಾರರು ಇದ್ದಾರೆ. ರಾಜ್ಯಾದ್ಯಂತ 7,884 ಮತಗಟ್ಟೆಗಳನ್ನು ರಚಿಸಲಾಗಿದ್ದು, ಸಂಜೆ 5ರಹೊತ್ತಿಗೆ ಮತದಾನ ಮುಕ್ತಾಯವಾಗಲಿದೆ.
ಇನ್ನು 7884 ಮತಗಟ್ಟೆಗಳಲ್ಲಿ ಅತ್ಯಂತ ವಿಶೇಷವಾಗಿ ಗಮನಸೆಳೆದಿದ್ದು ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯ ತಾಶಿಗಂಗ್ನಲ್ಲಿ, 15,256 ಅಡಿ ಎತ್ತರದಲ್ಲಿ ನಿರ್ಮಿಸಲಾದ ಮತಗಟ್ಟೆ. ವಿಶ್ವದಲ್ಲೇ ಅತ್ಯಂತ ಎತ್ತರ ಪ್ರದೇಶದಲ್ಲಿ ಇರುವ ಮತಗಟ್ಟೆ ಎಂಬ ಖ್ಯಾತಿಗೆ ಪಾತ್ರವಾದ ಈ ತಾಶಿಗಂಗ್ ಮತಕೇಂದ್ರದಲ್ಲಿ 52 ಮಂದಿ ಮತದಾನ ಮಾಡಲಿದ್ದಾರೆ. ಸ್ಥಳೀಯವಾಗಿ ಇರುವ ಹಿರಿಯ ನಾಗರಿಕರು ಮತ್ತು ಅಂಗವಿಕಲರು ತುಂಬ ದೂರದವರೆಗೆ ಹೋಗಿ ಮತದಾನ ಮಾಡಲು ಕಷ್ಟ ಎಂಬ ಕಾರಣಕ್ಕೆ ಇದೊಂದು ಮತಕೇಂದ್ರವನ್ನು ಸ್ಥಾಪಿಸಲಾಗಿದೆ.
ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯೊಂದು ಹಿಮಾಚ್ಛಾದಿತ ಪ್ರದೇಶ. ಇಡೀ ಜಿಲ್ಲೆಯಲ್ಲಿ ಕೇವಲ 92 ಮತಗಟ್ಟೆಗಳಿವೆ. ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮ ವೋಟಿಂಗ್ ಬೂತ್ಗಳನ್ನು ಹೊಂದಿರುವ ಜಿಲ್ಲೆಯಿದು. ಮತದಾರರು ಸುರಕ್ಷಿತವಾಗಿ ಬಂದು ಮತದಾನ ಮಾಡಲೂ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: Himachal Pradesh Polls | ಹಿಮಾಚಲ ಪ್ರದೇಶದಲ್ಲಿ ಮತದಾನ ಆರಂಭ; ಪ್ರಧಾನಿ ಮೋದಿ, ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್