ನವದೆಹಲಿ: 18 ತಿಂಗಳ ಪುಟ್ಟ ಮಗು ಮಹಿರಾ, ತಾನು ಜೀವ ಬಿಟ್ಟು, ಇಬ್ಬರು ರೋಗಿಗಳನ್ನು ಬದುಕಿಸಿದೆ. ಹರ್ಯಾಣದ ಮೇವಾತ್ನ ಈ ಹೆಣ್ಣು ಮಗು ನವೆಂಬರ್ 6ರಂದು ಬಾಲ್ಕನಿಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿತ್ತು. ಮಗುವನ್ನು ದೆಹಲಿಯ ಏಮ್ಸ್ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಯ ನಂತರವೂ ಅದು ಸುಧಾರಿಸಿಕೊಳ್ಳಲಿಲ್ಲ. ಈ ಮಗುವಿಗೆ ಮಿದುಳು ನಿಷ್ಕ್ರಿಯ(Brain Dead)ವಾಗಿದೆ ಎಂದು ನವೆಂಬರ್ 11ರಂದು ವೈದ್ಯರು ತಿಳಿಸಿದರು.
ವೈದ್ಯರ ಮಾತಿನಿಂದ ಕುಟುಂಬಕ್ಕೆ ದಿಗಿಲಾಯಿತು. ದಿಕ್ಕೇ ತೋಚದಂತೆ ಕುಳಿತಿದ್ದ ಪಾಲಕರು ಆ ಹೊತ್ತಲ್ಲೂ ಒಂದು ಮಹತ್ವದ ನಿರ್ಧಾರ ಮಾಡಿ, ಮಗುವಿನ ಅಂಗಾಂಗ ದಾನ ಮಾಡಿದ್ದಾರೆ. ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದ ಏಮ್ಸ್ ವೈದ್ಯ ಡಾ. ದೀಪಕ್ ಗುಪ್ತಾ, ‘ಮಗುವಿನ ಲಿವರ್ನ್ನು ಆರು ತಿಂಗಳ ಮಗುವಿಗೆ ಕಸಿ ಮಾಡಲಾಗಿದೆ ಮತ್ತು ಎರಡೂ ಕಿಡ್ನಿಗಳನ್ನು 17 ವರ್ಷದ ಬಾಲಕನಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ. ಹಾಗೇ, ‘ಅವಳ ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಸಂರಕ್ಷಿಸಲಾಗಿದ್ದು, ಸೂಕ್ತರಿಗೆ ಕಸಿ ಮಾಡಲಾಗುವುದು’ ಎಂದೂ ಮಾಹಿತಿ ನೀಡಿದ್ದಾರೆ.
ಕಳೆದ ಆರು ತಿಂಗಳಲ್ಲಿ ಅಂಗಾಂಗ ದಾನ ಮಾಡಿದ ಮೂರನೇ ಮಗು ಈ ಮಹಿರಾ. ಮೂರೂ ಮಕ್ಕಳ ಅಂಗಾಂಗ ದಾನಕ್ಕೂ ಸಾಕ್ಷಿಯಾಗಿದ್ದು ಏಮ್ಸ್. ಏಪ್ರಿಲ್ನಲ್ಲಿ ರಾಲಿ ಎಂಬ ಆರು ವರ್ಷದ ಹುಡುಗಿ, ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಳು. ಆಕೆಯ ಮಿದುಳು ನಿಷ್ಕ್ರಿಯವಾಗಿತ್ತು. ಅವಳ ಪಾಲಕರು ಆಕೆಯ ಅಂಗಾಂಗ ದಾನ ಮಾಡಿದ್ದರು. ಅದಾದ ಬಳಿಕ ಆಗಸ್ಟ್ನಲ್ಲಿ ರಿಶಾಂತ್ ಎಂಬ 16ತಿಂಗಳ ಮಗುವಿನ ಬ್ರೇನ್ ಡೆಡ್ ಆದಾಗಲೂ ಅವನ ಅಂಗಾಂಗಗಳನ್ನು ಡೊನೇಟ್ ಮಾಡಲಾಗಿತ್ತು. ಇದೀಗ ಮಹಿರಾ ಮಿದುಳು ನಿಷ್ಕ್ರಿಯವಾದ ಬಳಿಕ ವೈದ್ಯರ ತಂಡವೊಂದು ಆಕೆಯ ಪಾಲಕರನ್ನು ಕೌನ್ಸಿಲಿಂಗ್ಗೆ ಒಳಪಡಿಸಿ, ಅಂಗಾಂಗದಾನದ ಮಹತ್ವ ತಿಳಿಸಿತ್ತು. ಈ ವೇಳೆ ಅವರಿಗೆ ರಾಲಿ ಬಗ್ಗೆ ಕೂಡ ತಿಳಿಸಲಾಗಿತ್ತು. ಅದನ್ನೆಲ್ಲ ಕೇಳಿದ ಮೇಲೆ ಅಂಗಾಂಗ ದಾನಕ್ಕೆ ಒಪ್ಪಿದ್ದರು ಎಂದು ಡಾ. ಗುಪ್ತಾ ವಿವರಿಸಿದ್ದಾರೆ.
ಇದನ್ನೂ ಓದಿ: Organ donation | ಮೆದುಳು ನಿಷ್ಕ್ರಿಯ: ಯುವಕನ ಅಂಗಾಂಗ ದಾನದಿಂದ 8 ಜನರಿಗೆ ಜೀವ ದಾನ