Site icon Vistara News

Maoists killed: ಪೊಲೀಸರ ಮೇಲೆ ದಾಳಿಗೆ ಹೊಂಚು ಹಾಕಿದ್ದ ಇಬ್ಬರು ನಕ್ಸಲರ ಹತ್ಯೆ

2 Maoists killed By Police In Telangana

#image_title

ಹೈದರಾಬಾದ್: ತೆಲಂಗಾಣ-ಛತ್ತೀಸ್​ಗಢ್​​ನ ಗಡಿಯಲ್ಲಿರುವ ಭದ್ರಾದ್ರಿ-ಕೊತ್ತಗುಡೆಂ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಇಬ್ಬರು ಮಾವೋವಾದಿಗಳನ್ನು ತೆಲಂಗಾಣ ಪೊಲೀಸರು ಹೊಡೆದುರುಳಿಸಿದ್ದಾರೆ (Maoists killed). ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಕ್ಸಲರು ಪುಟ್ಟಪಾಡು ಅರಣ್ಯ ಪ್ರದೇಶದತ್ತ ಹೋಗಿ, ಅಲ್ಲಿ ಅಡಗಿ ಕುಳಿತು ಪೊಲೀಸರ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಆ ಅರಣ್ಯ ಪ್ರದೇಶವನ್ನು ಸುತ್ತುವರಿದಿದ್ದರು. ಪೊಲೀಸರು ಅರಣ್ಯವನ್ನು ಸುತ್ತುವರಿದಿದ್ದು ಗೊತ್ತಾಗುತ್ತಿದ್ದಂತೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಪೊಲೀಸರು ದಾಳಿ ಮಾಡಿ, ಇಬ್ಬರನ್ನು ಕೊಂದಿದ್ದಾರೆ. ಆ ಇಬ್ಬರೂ ನಕ್ಸಲರ ಮೃತದೇಹಗಳು ಪತ್ತೆಯಾಗಿವೆ.

ಮೃತ ನಕ್ಸಲರಲ್ಲಿ ಒಬ್ಬಾತನ ಹೆಸರು ರಾಜೇಶ್​. ಇವನು ನಕ್ಸಲ್​ ಸ್ಥಳೀಯ ಸಂಘಟನೆಯಾದ ಚೆರ್ಲಾ ಲೋಕಲ್​ ಆರ್ಗನೈಸೇಶನ್​ ಸ್ಕ್ವಾಡ್​​ನ ಕಮಾಂಡರ್​ ಆಗಿದ್ದ ಎನ್ನಲಾಗಿದೆ. ಆದರೆ ಇನ್ನೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ. ಇಬ್ಬರು ನಕ್ಸಲರ ಬಳಿಯಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.

ಇದನ್ನೂ ಓದಿ: Chhattisgarh Naxal Attack : ನಕ್ಸಲ್‌ ದಾಳಿಯ ಮಾಸ್ಟರ್‌ಮೈಂಡ್‌ ಫೋಟೊ ಬಿಡುಗಡೆ

ಛತ್ತೀಸ್​ಗಢ್​​ನ ದಂತೇವಾಡದಲ್ಲಿ ಇತ್ತೀಚೆಗೆ ನಕ್ಸಲರು ಭೀಕರದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಛತ್ತೀಸ್​ಗಢ್​ ಜಿಲ್ಲಾ ಮೀಸಲು ಪಡೆಯ 11 ಸೈನಿಕರು ಮೃತರಾಗಿದ್ದಾರೆ. ಅರನ್​ಪುರ ಎಂಬಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಇವರೆಲ್ಲರೂ ಅಲ್ಲಿಗೆ ತೆರಳಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಅಲ್ಲಿಂದ ವಾಪಸ್ ಬರುವಾಗ ದುರ್ಘಟನೆ ನಡೆದಿತ್ತು. ಸೈನಿಕರ ವಾಹನ ಬರುವ ಸ್ಥಳದಲ್ಲಿಯೇ ನಕ್ಸಲರು ಐಇಡಿ ಅಳವಡಿಸಿಟ್ಟಿದ್ದರು. ಅದು ಸ್ಫೋಟವಾಗಿ ಒಂದು ವಾಹನದಲ್ಲಿದ್ದ ಎಲ್ಲ ಸೈನಿಕರೂ ಮೃತರಾಗಿದ್ದರು.

Exit mobile version