ನವದೆಹಲಿ: ಏರ್ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎರಡು ವಿಮಾನಗಳು ಟೇಕ್ ಆಫ್ ಆಗಿ ಹಾರಾಟ ನಡೆಸುತ್ತಿದ್ದ ಕೆಲವೇ ಹೊತ್ತಲ್ಲಿ ವಾಪಸ್ ಬಂದು ಲ್ಯಾಂಡ್ ಆಗಿವೆ. ಇವೆರಡೂ ಸಹ ಏರ್ ಏಷ್ಯಾದ A320 ಸರಣಿಯ ವಿಮಾನಗಳಾಗಿದ್ದು ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದವು. ಒಂದು ವಿಮಾನದಲ್ಲಿ ದೋಷ ಕಂಡು ಬಂದು ವಾಪಸ್ ಬಂದ ಆರು ತಾಸುಗಳ ಅವಧಿಯಲ್ಲಿ ಇನ್ನೊಂದು ವಿಮಾನವೂ ಅರ್ಧ ದೂರ ಹೋಗಿ ಮತ್ತೆ ವಾಪಸ್ ಬಂದು ಲ್ಯಾಂಡ್ ಆಗಿದೆ.
ಮೊದಲು I5-712ನ VT-APJ ಎಂಬ ವಿಮಾನ ಶನಿವಾರ ಬೆಳಗ್ಗೆ 11.55ರ ಹೊತ್ತಿಗೆ ದೆಹಲಿ ಏರ್‌ಪೋರ್ಟ್‌ನಿಂದ ಟೇಕ್‌ಆಫ್ ಆಯಿತು. ಹೊರಟ ಒಂದೂವರೆ ತಾಸಿನ ಬಳಿಕ, ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ಘೋಷಣೆ ಮಾಡಿದರು. ಅದನ್ನು ಮಧ್ಯಾಹ್ನ1.45ರ ಹೊತ್ತಿಗೆ ಮತ್ತೆ ವಾಪಸ್ ದೆಹಲಿ ಏರ್‌ಪೋರ್ಟ್‌ಗೆ ತಂದು ಲ್ಯಾಂಡ್ ಮಾಡಲಾಯಿತು ಎಂದು ವಿಮಾನದಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ವಿಮಾನ ಶ್ರೀನಗರ ತಲುಪದೆ ವಾಪಸ್ ಬಂದಿದ್ದಕ್ಕೆ ಹಲವು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಅವರಿಗೆ ಅನುಕೂಲ ಮಾಡಿಕೊಡಲು ಮತ್ತೊಂದು ವಿಮಾನ ಸಿದ್ಧಪಡಿಸಲಾಯಿತು. ದೋಷ ಕಾಣಿಸಿಕೊಂಡು ವಾಪಸ್ ಬಂದ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ, ಈ VT-RED ವಿಮಾನವನ್ನು ಹತ್ತಿಕೊಂಡರು. ಇದೂ ಸಹ ದೆಹಲಿ ಏರ್‌ಪೋರ್ಟ್‌ನಿಂದ ಟೇಕ್‌ಆಫ್ ಆಗಿ ಕೆಲವೇ ಹೊತ್ತಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಬೇಕಾಯಿತು. ಸಂಜೆ 5 ಗಂಟೆ ಹೊತ್ತಿಗೆ ವಾಪಸ್ ದೆಹಲಿ ಏರ್‌ಪೋರ್ಟ್‌ಗೇ ಬಂದಿತ್ತು.
ಇದನ್ನೂ ಓದಿ: ಏರ್‌ಪೋರ್ಟ್‌ಗಳಲ್ಲಿ ಇನ್ನು ಈ ನಿಯಮ ಕಡ್ಡಾಯ; ಪಾಲಿಸದೆ ಇದ್ದರೆ ವಿಮಾನ ಹತ್ತಲು ಸಿಗದು ಅವಕಾಶ !
ಇಷ್ಟಾದ ಬಳಿಕ ಏರ್‌ಲೈನ್ ಇನ್ಯಾವುದೇ ವಿಮಾನ ವ್ಯವಸ್ಥೆ ಮಾಡಲಿಲ್ಲ. ʼನೀವು ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡರೆ ಹಣ ವಾಪಸ್ ನೀಡುತ್ತೇವೆ. ಅಥವಾ 30 ದಿನಗಳ ಒಳಗೆ ನಮ್ಮದೇ ಸಂಸ್ಥೆಯ ಯಾವುದೇ ವಿಮಾನ ಬುಕ್ ಮಾಡಿದರೂ ಅದೇ ಹಣವನ್ನು ಪರಿಗಣಿಸುತ್ತೇವೆ ಎಂದು ಹೇಳಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಏರ್ ಏಷ್ಯಾ ಇಂಡಿಯಾದ ವಕ್ತಾರರೊಬ್ಬರು ಹೇಳಿಕೆ ನೀಡಿ, ನಮ್ಮ ಎರಡೂ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರಯಾಣಿಕರಿಗೆ ಅನನುಕೂಲ ಆಗಿದ್ದಕ್ಕೆ ವಿಷಾದಿಸುತ್ತೇವೆ. ವಿಮಾನದ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದಿದ್ದಾರೆ. ಇನ್ನು A320 ವಿಮಾನ ತಯಾರಕ ಏರ್ ಬಸ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ನಿಮಗಿದು ಗೊತ್ತೆ? ವಿಮಾನದಲ್ಲಿ ಸುರಕ್ಷತೆಗೆ ಪ್ಯಾರಾಚೂಟ್ ಬಳಕೆಯಿಲ್ಲವೇಕೆ?