ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಎಲ್ಒಸಿ (ಗಡಿ ನಿಯಂತ್ರಣ ರೇಖೆ)ಬಳಿ ಒಳ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ (Terrorists Killed). ಇಬ್ಬರು ಉಗ್ರರು ಗಡಿ ಬಳಿ ಒಳನುಸುಳುತ್ತಿರುವಾಗ ಯೋಧರು ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಭಯೋತ್ಪಾದಕರೂ ಫೈರಿಂಗ್ ಮಾಡಿದ್ದರು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರ ಪ್ರಾಣ ಹೋಗಿದೆ. ಆ ಜಾಗದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಈ ಬಗ್ಗೆ ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ‘ಪೂಂಚ್ ಸೆಕ್ಟರ್ ಬಹಾದ್ದೂರ್ ಎಂಬಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಲಾಗಿದೆ. ಜುಲೈ 16ರ ತಡರಾತ್ರಿ ಒಳನುಸುಳುತ್ತಿದ್ದ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ’ ಎಂದು ತಿಳಿಸಿದ್ದಾರೆ. ಮೃತ ಉಗ್ರರದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ರಾಜೌರಿ, ಬಾರಾಮುಲ್ಲಾದಲ್ಲಿ ಎನ್ಕೌಂಟರ್, ಇಬ್ಬರು ಉಗ್ರರ ಹತ್ಯೆ; ಜಮ್ಮುವಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ಕಳೆದ ವಾರ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತಕ್ಕೆ ನುಸುಳುತ್ತಿದ್ದ ಉಗ್ರನೊಬ್ಬನ ಹತ್ಯೆ ಮಾಡಲಾಗಿತ್ತು. ಅಲ್ಲಿನ ನೌಶೇರಾ ವಲಯದ ಎಲ್ಒಸಿ ಬಳಿ ಮೂರ್ನಾಲ್ಕು ಉಗ್ರರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅವರ ಮೇಲೆ ಭಾರತೀಯ ಯೋಧರು ಕಣ್ಣಿಟ್ಟಿದ್ದರು. ಕೆಲ ಹೊತ್ತಿನ ಬಳಿ ಒಬ್ಬ ಉಗ್ರ ಗಡಿ ಬೇಲಿಯ ಬಳಿ ಬಂದು, ಇನ್ನೇನು ಅದನ್ನು ದಾಟಬೇಕು ಎನ್ನುವಷ್ಟರಲ್ಲಿ ಗುಂಡು ಹಾರಿಸಲಾಗಿತ್ತು. ಅವನ ಬಳಿಯಿದ್ದ ಎಕೆ47 ರೈಫಲ್, ಮೂರು ಎಕೆ ಮ್ಯಾಗಾಝಿನ್ಸ್, 9 ಎಂಎಂ ಪಿಸ್ತೂಲ್, ನಾಲ್ಕು ಹ್ಯಾಂಡ್ ಗ್ರೆನೇಡ್, ಸಂಪರ್ಕಕ್ಕೆ ಬಳಸುವ ಸಾಧನಗಳು, ಬಟ್ಟೆಗಳು, ತಿನ್ನುವ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು.