Site icon Vistara News

Terrorists Killed | ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ; ಅಡಗಿರುವ ಉಗ್ರರ ಹಿಡಿಯಲು ಕಾರ್ಯಾಚರಣೆ

Terrorists Killed

ಶ್ರೀನಗರ: ಜಮ್ಮು-ಕಾಶ್ಮೀರದ ಬುದ್ಗಾಮ್​​ ಜಿಲ್ಲೆಯಲ್ಲಿ ಇಂದು ಮುಂಜಾನೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆಗೈದಿದ್ದಾರೆ. ಬುದ್ಗಾಮ್​​​ನಲ್ಲಿರುವ ನ್ಯಾಯಾಲಯ ಸಂಕೀರ್ಣದ ಸಮೀಪ ಭದ್ರತಾ ಪಡೆ ಸಿಬ್ಬಂದಿ, ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಇನ್ನೂ ಆ ಪ್ರದೇಶವನ್ನು ರಕ್ಷಣಾ ಪಡೆ ಸಿಬ್ಬಂದಿ ಸುತ್ತುವರಿದಿದ್ದಾರೆ. ಅಲ್ಲಿ ಅಡಗಿರುವ ಭಯೋತ್ಪಾದಕರನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.

ಉಗ್ರರನ್ನು ಹತ್ಯೆ ಮಾಡಿದ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ‘ಆ ಭಾಗದಲ್ಲಿ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೈನಿಕರು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಆ ಪ್ರದೇಶಕ್ಕೆ ಬಂದ ಎಲ್ಲ ಅನುಮಾನಾಸ್ಪದ ವಾಹನಗಳನ್ನೂ ತಪಾಸಣೆ ಮಾಡಲಾಗಿದೆ. ಈ ವೇಳೆ ಉಗ್ರರು ಗುಂಡುಹಾರಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಆಗ ರಕ್ಷಣಾ ಪಡೆಗಳೂ ಗುಂಡು ಹಾರಿಸಿವೆ. ಇದರಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ’ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Rajouri Terror Attack | ರಾಜೌರಿಯಲ್ಲಿ ದಾಳಿ ನಡೆಸಿದ್ದ ಇಬ್ಬರು ಉಗ್ರರ ಹತ್ಯೆ; ಮೃತ ನಾಗರಿಕರ ಸಂಖ್ಯೆ 7ಕ್ಕೆ ಏರಿಕೆ

Exit mobile version