ಪಾಟ್ನಾ: ಪ್ರಧಾನಮಂತ್ರಿ, ಮುಖ್ಯಮಂತ್ರಿ, ಮಂತ್ರಿಗಳು ಸಾಗುವ ಮಾರ್ಗದಲ್ಲಿ ಭದ್ರತೆ ಜಾಸ್ತಿಯಿರುತ್ತದೆ. ಜನಸಾಮಾನ್ಯರ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಇದು ವಿಐಪಿ ಸಂಸ್ಕೃತಿ..ಈ ವಿಐಪಿ ಸಂಸ್ಕೃತಿಯಿಂದ ಅದೆಷ್ಟೋ ಜನರಿಗೆ ತೊಂದರೆಯಾದ ಘಟನೆಯೂ ನಡೆದಿದೆ. ಆದರೆ ಬಿಹಾರದಲ್ಲಿ ಇನ್ನೂ ಮುಂದುವರಿದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕೆ ಅಡ್ಡಿಯಾಗಬಾರದು ಎಂದು ಎರಡು ರೈಲುಗಳ ಸಂಚಾರ ತಡೆ ಹಿಡಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾರು ತಮ್ಮ ಬೆಂಗಾವಲು ವಾಹನಗಳೊಂದಿಗೆ ಸಾಗುತ್ತಿತ್ತು. ಈ ವೇಳೆ ಬುಕ್ಸಾರ್ ಜಿಲ್ಲೆಯಲ್ಲಿ ಎರಡು ಪ್ರಯಾಣಿಕರ ರೈಲುಗಳನ್ನು ಸುಮಾರು 30 ನಿಮಿಷಗಳ ಕಾಲ ತಡೆ ಹಿಡಿಯಲಾಗಿತ್ತು. ಸಿಎಂ ಬೆಂಗಾವಲು ವಾಹನಗಳು ಹೋದ ಬಳಿಕವೇ ಆ ರೈಲುಗಳು ಸಂಚಾರ ಮುಂದುವರಿಸಿದವು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರೈಲ್ವೆ ಇಲಾಖೆಗೆ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ಸದ್ಯ ಸಮಾಧಾನ್ ಯಾತ್ರೆ ನಡೆಸುತ್ತಿದ್ದಾರೆ. ಬುಕ್ಸಾರ್ನ ಪೊಲೀಸ್ ಲೈನ್ಸ್ನಿಂದ ಗೆಸ್ಟ್ಹೌಸ್ಗೆ ತೆರಳುತ್ತಿದ್ದರು. ಅವರ ವಾಹನ ರೈಲ್ವೆ ಕ್ರಾಸಿಂಗ್ ಮೂಲಕವೇ ಸಾಗಬೇಕಿತ್ತು. ನಿತೀಶ್ ಕುಮಾರ್ ಬೆಂಗಾವಲು ವಾಹನಗಳು ರೈಲ್ವೆ ಕ್ರಾಸಿಂಗ್ಗೆ ಬರುವ ವೇಳೆಯಲ್ಲೇ ಪಾಟ್ನಾ-ಬುಕ್ಸಾರ್ ಲೋಕಲ್ ರೈಲು ಮತ್ತು ಕಾಮಾಕ್ಯಾ ಎಕ್ಸ್ಪ್ರೆಸ್ ರೈಲು ಅಲ್ಲಿ ಪಾಸ್ ಆಗಬೇಕಿತ್ತು. ಆದರೆ ಮುಖ್ಯಮಂತ್ರಿ ವಾಹನಗಳು ಹೋಗುವವರೆಗೂ ಆ ಎರಡೂ ರೈಲುಗಳನ್ನು, ಅಂದರೆ ಸುಮಾರು ಅರ್ಧಗಂಟೆ ನಿಲ್ಲಿಸಲಾಗಿದೆ. ಇದರಿಂದಾಗಿ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ರಾವಣ-ಕಂಸನಿಗೂ, ನಿತೀಶ್ ಕುಮಾರ್ರನ್ನು ರಾಮ-ಕೃಷ್ಣನಿಗೂ ಹೋಲಿಸಿದ ಆರ್ಜೆಡಿ!