Site icon Vistara News

2024ರ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ: ಗೃಹ ಸಚಿವ ಅಮಿತ್‌ ಶಾ

Amit Shah

ಪಾಟ್ನಾ: 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಸಿದ್ಧತೆ ಪ್ರಾರಂಭವಾಗಿದೆ. 2024ರಲ್ಲೂ ಎನ್‌ಡಿಎ ಒಕ್ಕೂಟವೇ ಸರ್ಕಾರ ರಚನೆ ಮಾಡಬಹುದು ಎಂಬ ನಿರೀಕ್ಷೆ ಜಾಸ್ತಿಯಾಗಿದ್ದು, ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ಅಭ್ಯರ್ಥಿ ಯಾರು? ಎಂಬ ಕುತೂಹಲವೂ ಇದ್ದೇ ಇದೆ. ಇದೀಗ ಗೃಹ ಸಚಿವ ಅಮಿತ್‌ ಶಾ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯೂ ನರೇಂದ್ರ ಮೋದಿ ನೇತೃತ್ವದಲ್ಲೇ ನಡೆಯುತ್ತದೆ. ಮೋದಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಪಾಟ್ನಾದಲ್ಲಿ ಕಳೆದ ಎರಡು ದಿನ ನಡೆದ ಬಿಜೆಪಿಯ ಯುನೈಟೆಡ್‌ ಫ್ರಂಟ್‌ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್‌ ಶಾ, ʼ2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆʼ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಆಗಸ್ಟ್‌ 13-15ರವರೆಗೆ ದೇಶಾದ್ಯಂತ ಎಲ್ಲ ಕಡೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗುವುದು. ಬಿಜೆಪಿ ಕಾರ್ಯಕರ್ತರೇ ಮುಂದಾಗಿ ನಿಂತು ಇದನ್ನು ಮಾಡಿಸಲಿದ್ದಾರೆ ಎಂದು ಹೇಳಿದ ಅಮಿತ್‌ ಶಾ, ಪ್ರಧಾನಿ ಮೋದಿ ಸರ್ಕಾರದಲ್ಲಿ ಬುಡಕಟ್ಟು ಸಮುದಾಯದ, ದಲಿತ ಸಮಾಜದ, ಹಳ್ಳಿಗಳ ಮೂಲಗಳಿಂದ ಬಂದ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳೂ ಇಂಥ ಸಮುದಾಯಗಳ ನಾಯಕರಿಗೆ ಸಚಿವ ಸ್ಥಾನ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಮಹಿಳೆಯರು ಮಾಡಿದ ರಾಷ್ಟ್ರಧ್ವಜವನ್ನು ಇದೇ ಸಭೆಯಲ್ಲಿ ಎಲ್ಲರಿಗೂ ಹಂಚಲಾಯಿತು.

ಇದೇ ಸಭೆಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತು 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ. ಅದರಲ್ಲಿ ಯಾವುದೇ ಅನುಮಾನವಾಗಲಿ, ಗೊಂದಲವಾಗಲೀ ಬೇಡ ಎಂದು ತಿಳಿಸಿದ್ದಾರೆ. ಅಲ್ಲದೆ, ಇವರೂ ಸಹ ಮುಂದಿನ ಪ್ರಧಾನಿ ಅಭ್ಯರ್ಥಿಯೂ ನರೇಂದ್ರ ಮೋದಿ ಎಂದೇ ಹೇಳಿದ್ದಾರೆ.

ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಉದಯಿಸಲಿದೆ: ಕತ್ತಿಯಿಂದ ಮತ್ತೆ ವಿಭಜನೆ ಮಾತು

Exit mobile version