Site icon Vistara News

ಭಾರತದಲ್ಲಿ 25ವರ್ಷದಲ್ಲಿ ಮುಸ್ಲಿಂ ಆಡಳಿತ ತರುವ ಸಂಚು; ಇನ್ನೊಬ್ಬ ಅರೆಸ್ಟ್‌, ಮತ್ತೂ ಮೂವರಿಗಾಗಿ ಶೋಧ

PFI

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಇತ್ತೀಚೆಗೆ ಪಿಎಫ್‌ಐ ಉಗ್ರ ಘಟಕವೊಂದನ್ನು ಬೇಧಿಸಿದ ಪೊಲೀಸರು ಇಬ್ಬರು ಉಗ್ರರನ್ನು ಬಂಧಿಸಿದ್ದರು. ಅಥರ್‌ ಫರ್ವೇಜ್‌ ಮತ್ತು ಎಂಡಿ ಜಲಾಲುದ್ದೀನ್‌ ಎಂಬ ಇಬ್ಬರು ಶಂಕಿತ ಭಯೋತ್ಪಾದಕರನ್ನು ಅರೆಸ್ಟ್‌ ಮಾಡಿ, ಅವರಿಂದ ಎರಡು ದಾಖಲೆಯನ್ನು ವಶಪಡಿಸಿಕೊಂಡಿದ್ದರು. ಅದರಲ್ಲೊಂದು. ʼ2047ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಆಡಳಿತ ತರುವುದುʼ. ಇನ್ನು 25 ವರ್ಷದಲ್ಲಿ ಭಾರತದಲ್ಲಿ ಇಸ್ಲಾಂ ವೈಭವ ಮರಳಲಿದೆ ಎಂಬ ಒಕ್ಕಣೆಯನ್ನು ಹೊಂದಿರುವ ಈ ದಾಖಲೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅದರ ಜಾಡು ಹಿಡಿದು ತನಿಖೆ ಶುರುವಾಗಿದೆ. ಈಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧುಬಾನಿ, ಕಠಿಹಾರ್‌, ಅರಾರಿಯಾ, ಮೋತಿಹಾರಿ, ಮುಜಾಫರ್‌ಪುರ, ಪಾಟ್ನಾಗಳಲ್ಲಿ ಬಿಹಾರ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ದರ್ಭಾಂಗಾ ಎಸ್‌ಎಸ್‌ಪಿ ಅವಾಕಾಶ್‌ ಕುಮೈ, ʼಪಾಟ್ನಾ ಪಿಎಫ್‌ಐ ಕೇಸ್‌ನಲ್ಲಿ ಇನ್ನೂ ಮೂವರು ಪ್ರಮುಖ ಆರೋಪಿಗಳು ಇದ್ದಾರೆ. ಅವರೆಲ್ಲ ದರ್ಭಾಂಗಾ ನಿವಾಸಿಗಳು. ಅವರನ್ನು ಪತ್ತೆ ಮಾಡಲು ನಾವು ವಿವಿಧ ಸ್ಥಳಗಳಲ್ಲಿ ರೇಡ್‌ ಮಾಡಿದ್ದೇವೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ನಾವು ಪಾಟ್ನಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಜತೆಯಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟು 26ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ಆರೋಪಿ ಅರೆಸ್ಟ್‌ !
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮತ್ತು ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸುವ ಪಿತೂರಿಯಲ್ಲಿ ಪಾಲುದಾರನಾಗಿರುವ 26 ವರ್ಷದ ಮಾರ್ಗವ್ ಅಹ್ಮದ್ ದಾನಿಶ್ ಅಲಿಯಾಸ್ ತಾಹಿರ್ ಎಂಬಾತನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಈತ ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆ ತೆಹ್ರಿಕ್-ಎ-ಲಬ್ಬಾಯಿಕ್ ಜತೆ ಸಂಪರ್ಕ ಹೊಂದಿದ್ದ ಎಂದೂ ಗೊತ್ತಾಗಿದೆ.

ಈತ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯನಾಗಿದ್ದ. ಘಾಜ್ವಾ ಇ ಹಿಂದ್‌ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ ನಡೆಸುತ್ತಿದ್ದ. ಅದರಲ್ಲಿ ಅವನು ಪೋಸ್ಟ್‌ ಮಾಡುತ್ತಿದ್ದುದೆಲ್ಲ ಭಾರತ ವಿರೋಧಿ ವಿಚಾರಗಳೇ ಆಗಿದ್ದವು. ಭಾರತದ ಧ್ವಜ, ಲಾಂಛನಗಳನ್ನೆಲ್ಲ ಇದರಲ್ಲಿ ಅವಹೇಳನ ಮಾಡಲಾಗುತ್ತಿತ್ತು. ಆ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿ ವಿವಿಧ ದೇಶಗಳ ಪ್ರಜೆಗಳು ಇದ್ದಾರೆ. ಸದ್ಯ ಆತನ ಫೋನ್‌ ಜಪ್ತಿ ಮಾಡಲಾಗಿದ್ದು, ಅದರಲ್ಲಿದ್ದ ನಂಬರ್‌ಗಳನ್ನೆಲ್ಲ ಟ್ರೇಸ್‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಂಧಿತ ಉಗ್ರರ ಬಳಿಯಿದ್ದ ದಾಖಲೆಯಲ್ಲಿದೆ ಶಾಕಿಂಗ್‌ ವಿಷಯ; ಪಿಎಫ್‌ಐ ಯೋಜನೆ ಬಹಿರಂಗ !

ಅಂತರ ಕಾಯ್ದುಕೊಂಡು ಪಿಎಫ್‌ಐ
ಇಷ್ಟೆಲ್ಲ ಆದರೂ ಪಿಎಫ್‌ಐ ಸಂಘಟನೆ ತನಗೂ ಇದಕ್ಕೂ ಸಂಬಂಧ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದೆ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುತ್ತೇವೆ ಎಂಬ ದಾಖಲೆ ನಮ್ಮದಲ್ಲ. ಇಲ್ಲಿಯವರೆಗೆ ಎನ್‌ಐಎ, ಇಡಿ ಮತ್ತಿತರ ತನಿಖಾ ದಳಗಳು ನಮ್ಮ ಬೆನ್ನ ಹಿಂದೆ ಬಂದಿದ್ದವು. ಈಗ ರಾಜ್ಯ, ನಗರಗಳ ಪೊಲೀಸರು ನಮ್ಮ ಬೆನ್ನ ಹಿಂದೆ ಬಿದ್ದಿದ್ದಾರೆ. ಯಾರೇನೇ ಹೇಳಿದರೂ ಈ ದಾಖಲೆ ನಮ್ಮದಲ್ಲ. ಅದರಲ್ಲಿರುವ ಕೋಡ್‌ಗೂ ನಮ್ಮ ಕೋಡ್‌ಗಳಿಗೂ ತಾಳೆಯಾಗುತ್ತಿಲ್ಲ. ಇವೆಲ್ಲ ಪೊಲೀಸರೇ ಸೃಷ್ಟಿಸಿದ ಕಾಲ್ಪನಿಕ ಕಥೆ ಎಂದು ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನಿಸ್‌ ಅಹ್ಮದ್‌ ಹೇಳಿದ್ದಾನೆ.

ಇದನ್ನೂ ಓದಿ: ಪಿಎಫ್‌ಐ ಸಂಘಟನೆಯಿಂದ ಮೋದಿ ಹತ್ಯೆ ಸಂಚು, ಬಿಹಾರದಲ್ಲಿ ಇಬ್ಬರು ಉಗ್ರರ ಸೆರೆ


Exit mobile version