ನವ ದೆಹಲಿ: ಅಂಡಮಾನ್ ಮತ್ತು ನಿಕೋಬಾರ್ (Andaman and Nicobar)ನಲ್ಲಿರುವ 21 ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಜನವರಿ 23ರಂದು ನಾಮಕರಣ ಮಾಡಲಿದ್ದಾರೆ. ಈ ಎಲ್ಲ ದ್ವೀಪಗಳೂ ದೊಡ್ಡದೊಡ್ಡ ದ್ವೀಪಗಳೇ ಆಗಿದ್ದು, ಯಾವಕ್ಕೂ ಹೆಸರಿಲ್ಲ. ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ದ್ವೀಪಗಳಿಗೆ ನಾಮಕರಣ ಮಾಡುವರು. ಅಂದಹಾಗೇ, ಸೇನಾ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ಪರಮ ವೀರ ಚಕ್ರ ಪ್ರಶಸ್ತಿಗೆ ಭಾಜನರಾದವರ ಹೆಸರನ್ನೇ ಈ ದ್ವೀಪಗಳಿಗೆ ಪ್ರಧಾನಿ ಮೋದಿ ಇಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇರುವ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ 2018ರಲ್ಲಿ ಅಲ್ಲಿನ ರಾಸ್ ದ್ವೀಪಗಳಿಗೆ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದೇ ಮರುನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಂಡಮಾನ್-ನಿಕೋಬಾರ್ ದ್ವೀಪಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಈ ಬದಲಾವಣೆ ಮಾಡಲಾಯಿತು. ಅಷ್ಟೇ ಅಲ್ಲ, ನೇಲ್ ದ್ವೀಪಕ್ಕೆ ಶಾಹೀದ್ ದ್ವೀಪವೆಂದೂ, ಹ್ಯಾವ್ಲಾಕ್ ಐಸ್ಲ್ಯಾಂಡ್ಗೆ ಸ್ವರಾಜ್ ದ್ವೀಪವೆಂದೂ ಮರುನಾಮಕರಣ ಮಾಡಲಾಯಿತು. 2021ರಿಂದ ಪ್ರತಿವರ್ಷ ಜನವರಿ 23, ಅಂದರೆ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿವಸ್ ಎಂದೇ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಲದ ಪರಾಕ್ರಮ ದಿವಸ್ ಸ್ಮರಣಾರ್ಥ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ 21 ದೊಡ್ಡ ದ್ವೀಪಗಳಿಗೆ ಹೆಸರು ಇಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕರೆನ್ಸಿ ನೋಟ್‌ನಲ್ಲಿ ಸುಭಾಷ್‌ಚಂದ್ರ ಬೋಸ್ ಫೋಟೊ: ಪಿಐಎಲ್ ವಜಾ
ಹೀಗೆ ಹೆಸರಿಲ್ಲದೆ ಇರುವ 21 ದ್ವೀಪಗಳ ಪೈಕಿ ಅತಿದೊಡ್ಡ ದ್ವೀಪಕ್ಕೆ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಪ್ರಧಾನಿ ಮೋದಿ ಇಡಲಿದ್ದಾರೆ. ಇವರು ಮೊಟ್ಟಮೊದಲಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರು. 1947ರ ನವೆಂಬರ್ 3ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಅವರು ಹುತಾತ್ಮರಾದರು. ಮರಣೋತ್ತರವಾಗಿ ಅವರಿಗೆ ಪರಮವೀರ ಚಕ್ರ ನೀಡಲಾಗಿದೆ. ಇನ್ನುಳಿದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಉಳಿದ ದ್ವೀಪಗಳಿಗೆ ಇಡಲಾಗುವುದು ಎಂದು ಪಿಎಂಒ ಮಾಹಿತಿ ನೀಡಿದೆ.