ಚೆನ್ನೈ: ಕುದಿಯುವ ನೀರು, ಸಾಂಬಾರ್ನಲ್ಲಿ ಬಿದ್ದು ಮಕ್ಕಳು ಮೃತಪಟ್ಟಿದ್ದು, ಇಂಥ ಕುದಿಯುವ ಪದಾರ್ಥಗಳು ಬಿದ್ದು ಗಂಭೀರವಾಗಿ ಗಾಯಗೊಂಡವರ ಬಗ್ಗೆ ನಾವು ಕೇಳಿದ್ದೇವೆ. ತಮಿಳುನಾಡಿನ (Tamil Nadu News)ತಿರುವಲ್ಲೂರ್ ಜಿಲ್ಲೆಯಲ್ಲಿ ಇಂಥದ್ದೇ ಒಂದು ದಾರುಣ ಘಟನೆ ನಡೆದಿದೆ. 21ವರ್ಷದ ಯುವಕನೊಬ್ಬ ಬಿಸಿಬಿಸಿ ರಸಂ ಇರುವ ದೊಡ್ಡ ಕಡಾಯಿಗೆ ಬಿದ್ದು ಮೃತಪಟ್ಟಿದ್ದಾನೆ.
ಮೃತ ಯುವಕ ಕಾಲೇಜು ವಿದ್ಯಾರ್ಥಿ. ಇವನ ಹೆಸರು ಸತೀಶ್. ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ. ಇವನು ಸಮಯ ಸಿಕ್ಕಾಗಲೆಲ್ಲ ಅಡುಗೆಗೆ ಹೋಗಿ, ಹಣ ಗಳಿಸುತ್ತಿದ್ದ. ಹಾಗೇ, ಕಳೆದ ವಾರವೂ ಕೂಡ ಅವನು ಮದುವೆಯೊಂದಕ್ಕೆ ಹೋಗಿದ್ದ. ಅಲ್ಲಿ ಬಂದ ಅತಿಥಿಗಳಿಗೆ ಊಟ ಬಡಿಸುತ್ತಿದ್ದ. ಅತಿಥಿಗಳು ಕುಳಿತು ಊಟ ಮಾಡುತ್ತಿದ್ದ ಜಾಗದಿಂದ ಸತೀಶ್ ವೇಗವಾಗಿ ಅಡುಗೆ ಮನೆಗೆ ಹೋಗುತ್ತಿದ್ದ. ಅಲ್ಲಿ ಅಡುಗೆ ಮನೆಯಲ್ಲಿ , ಬದಿಗೆ ರಸಂನ ಕಡಾಯಿ ಇಡಲಾಗಿತ್ತು. ಆ ರಸಂ ಸಿಕ್ಕಾಪಟೆ ಬಿಸಿಯಾಗಿತ್ತು. ಹುಡುಗ ಕಾಲು ಎಡವಿ ಕಡಾಯಿಯಲ್ಲಿ ಬಿದ್ದಿದ್ದಾನೆ. ಹುಡುಗನ ಜತೆಗಿದ್ದವನು ಕೂಡಲೇ ಅವನನ್ನು ಮೇಲೆತ್ತಿದ್ದಾನೆ. ಅಷ್ಟರಲ್ಲಿ ಸತೀಶ್ಗೆ ತೀವ್ರ ಸುಟ್ಟಗಾಯಗಳಾಗಿದ್ದವು. ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭ ಮಾಡಿದ್ದಾರೆ.
ಇದನ್ನೂ ಓದಿ: H3N2 Virus: ಎಚ್3ಎನ್2 ಸೋಂಕಿಗೆ ಒಳಗಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ ಸಾವು; ಕೊವಿಡ್ 19 ಕೂಡ ಬಾಧಿಸುತ್ತಿತ್ತು
ಸತೀಶ್ನ ಪಾಲಕರು ಸಾಮಾನ್ಯ ಕೂಲಿ ಕಾರ್ಮಿಕರಾಗಿದ್ದಾರೆ. ಇದೇ ಕಾರಣಕ್ಕೆ ಸತೀಶ್ ತನ್ನ ಖರ್ಚು ನಿಭಾಯಿಸಿಕೊಂಡು, ಓದುವ ಸಲುವಾಗಿ ಪಾರ್ಟ್ಟೈಂ ಜಾಬ್ ಮಾಡುತ್ತಿದ್ದ. ಅಡುಗೆ ಮಾಡಿ, ಸರ್ವ್ ಮಾಡುವ ಸಂಸ್ಥೆಯೊಂದರಲ್ಲಿ ಉದ್ಯೋಗ ಹುಡುಕಿಕೊಂಡಿದ್ದ. ಈ ಹಿಂದೆಯೂ ಹಲವು ಬಾರಿ, ವಿವಿಧ ಕಡೆಗಳಲ್ಲಿ ನಡೆದ ಮದುವೆ, ಮತ್ತಿತರ ಸಮಾರಂಭಗಳಿಗೆ ಆತ ಹೀಗೆ ಅಡುಗೆಗೆ, ಊಟ ಬಡಿಸಲು ಹೋಗಿದ್ದ.