ಒಡಿಶಾದ ಬಾಲಾಸೋರ್ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೂರು ರೈಲುಗಳ ಮಧ್ಯೆಯ ಡಿಕ್ಕಿಯಿಂದ ಇಷ್ಟು ದೊಡ್ಡಮಟ್ಟದ ಅವಘಡ ಆಗಿದ್ದು, ಇತ್ತೀಚಿನ ವರ್ಷಗಳಲ್ಲೇ ಭೀಕರ ರೈಲು ಅಪಘಾತವಾಗಿದೆ. ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲಿನ ಮಧ್ಯೆ ಅಪಘಾತವಾಗಿತ್ತು.
ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್ಪ್ರೆಸ್ ರೈಲು ಮತ್ತು ಒಂದು ಗೂಡ್ಸ್ ರೈಲಿನ ಮಧ್ಯೆ ಬಾಲಾಸೋರ್ ಬಳಿ ಮೊದಲು ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಕೋರಮಂಡಲ ರೈಲಿನ 10-12 ಬೋಗಿಗಳು ಕಳಚಿ ಅಕ್ಕ-ಪಕ್ಕದ ಹಳಿಗಳ ಮೇಲೆ ಉರುಳಿಬಿದ್ದವು. ಆದರೆ ಈ ಅಪಘಾತದ ಬಗ್ಗೆ ಗೊತ್ತಿಲ್ಲದೆ, ಪಕ್ಕದ ಹಳಿಯ ಮೇಲೆ ಬಂದ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ರೈಲಿಗೂ ಅಪಾಯ ಕಾದಿತ್ತು. ಅದಾಗಲೇ ಹಳಿಯ ಮೇಲೆ ಬಿದ್ದಿದ್ದ ಕೋರಮಂಡಲ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದು, ಈ ರೈಲು ಕೂಡ ಅಪಘಾತಕ್ಕೀಡಾಗಿದೆ. ಒಡಿಶಾ ರಾಜ್ಯಾದ್ಯಂತ ಇದು ಒಂದು ದಿನದ ಶೋಕಾಚರಣೆಗೆ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: Odisha Rail Accident : ಅವಘಡ ತಡೆಯಲು ಕವಚ್ ಇದ್ದರೂ ಒಡಿಶಾದಲ್ಲಿ ರೈಲು ಅಪಘಾತ ನಡೆದಿದ್ದು ಹೇಗೆ?
ರೈಲು ದುರಂತದ ಬಗ್ಗೆ ಪ್ರಧಾನಿ ಮೋದಿಯವರು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಹಾಗೇ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಕ್ರಿಯೆ ನೀಡಿ ‘ಈ ದುರಂತ ನಿಜಕ್ಕೂ ವಿಷಾದನೀಯ. ಮೂರು ರೈಲುಗಳ ಮಧ್ಯೆ ಅಪಘಾತವಾಗುತ್ತಿದ್ದಂತೆ ಸ್ವಲ್ಪವೂ ತಡಮಾಡದೆ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಯಿತು. ಈ ರೈಲು ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಯಾಣಿಕರ ಪರದಾಟ
ಒಡಿಶಾದಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ಬೆಂಗಳೂರು-ಗುವಾಹಟಿ ರೈಲು ಸಂಚಾರ ರದ್ದುಗೊಂಡಿದೆ. ಬರೀ ಇದೊಂದೇ ಅಲ್ಲ, ಅಪಘಾತವಾದ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹಲವು ರೈಲುಗಳು ವಿಳಂಬವಾಗುತ್ತಿವೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರು-ಗುವಾಹಟಿ ರೈಲು ರದ್ದಾದ ಬೆನ್ನಲ್ಲೇ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಟಿಕೆಟ್ ವಾಪಸ್ ಕೊಡಿ ಎಂದು ಕೂಗಾಡುತ್ತಿದ್ದಾರೆ. ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.