ನವ ದೆಹಲಿ: ಭಾರತದಲ್ಲೂ ಮತ್ತೊಮ್ಮೆ ಕೊವಿಡ್ 19 ಅಬ್ಬರಿಸಲಿದೆ, ಕೊರೊನಾ ನಾಲ್ಕನೇ ಅಲೆ ಏಳಲಿದೆ, ಮತ್ತೆ ಲಾಕ್ಡೌನ್ ಆಗಬಹುದು ಎಂಬಿತ್ಯಾದಿ ಆತಂಕಗಳು ಈಗಾಗಲೇ ಶುರುವಾಗಿವೆ. ಈ ಮಧ್ಯೆ ದೇಶದಲ್ಲಿ ಪ್ರಸ್ತುತ ದಿನಕ್ಕೆ ಎಷ್ಟು ಕೊರೊನಾ ಕೇಸ್ಗಳು ದಾಖಲಾಗುತ್ತಿರಬಹುದು? ಸಕ್ರಿಯ ಪ್ರಕರಣಗಳು ಎಷ್ಟಿವೆ? ಇಲ್ಲಿದೆ ಮಾಹಿತಿ.
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 236 ಹೊಸ ಕೊರೊನಾ ಕೇಸ್ಗಳು ದಾಖಲಾಗಿವೆ. ಹಾಗೇ ಒಂದು ದಿನದಲ್ಲಿ ಕೊರೊನಾದಿಂದ ಕೇರಳದಲ್ಲಿ ಒಬ್ಬರು ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರು, ಅಂದರೆ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಕೊವಿಡ್ 19ನಿಂದ ಮೃತಪಟ್ಟವರ ಸಂಖ್ಯೆ 5,30,693. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3424ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನ ಚೇತರಿಕಾ ಪ್ರಮಾಣ ಶೇ. 98.80ರಷ್ಟಿದ್ದು, ಸಕ್ರಿಯ ಪ್ರಕರಣದ ದರ ಒಟ್ಟಾರೆ ಸೋಂಕಿತರ ಸಂಖ್ಯೆಯ 0.01ರಷ್ಟಿದೆ.
ಭಾರತದಲ್ಲಿ ಕೊರೊನಾ ಪ್ರಸರಣ ಸದ್ಯಕ್ಕಂತೂ ವೇಗ ಪಡೆದಿಲ್ಲ. ಒಂದೊಂದು ರಾಜ್ಯದಲ್ಲೇ ದಿನಕ್ಕೆ ಸಾವಿರ ಕೇಸ್ಗಳು ದಾಖಲಾಗಿದ್ದನ್ನೂ ನಾವು ನೋಡಿದ್ದೇವೆ. ಹೀಗಿರುವಾಗ ಒಟ್ಟಾರೆ ದೇಶದಲ್ಲಿ ಕಳೆದ 24ಗಂಟೆಯಲ್ಲಿ 236 ಕೇಸ್ಗಳು ಪತ್ತೆಯಾಗಿದ್ದು ಅಂಥ ಆತಂಕಕಾರಿ ಸಂಗತಿ ಅಲ್ಲದೆ ಇದ್ದರೂ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
ಚೀನಾ, ಜಪಾನ್, ಥೈಲ್ಯಾಂಡ್, ದಕ್ಷಿಣ ಕೊರಿಯಾ ದೇಶಗಳಲ್ಲಿ ಕೊರೊನಾ ಮಿತಿಮೀರಿರುವ ಹಿನ್ನೆಲೆಯಲ್ಲಿ, ಆ ದೇಶದಿಂದ ಬರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗೇ, ಎಲ್ಲರೂ ಬೂಸ್ಟರ್ ಲಸಿಕೆ ತೆಗೆದುಕೊಳ್ಳುವಂತೆ ಸೂಚಿಸಿದೆ. ಇನ್ನು ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ ಲಸಿಕೆಯು ( iNCOVACC ಅಥವಾ BBV154 ) ಶುಕ್ರವಾರ ಸಂಜೆಯಿಂದ ಲಭ್ಯವಾಗುತ್ತಿದ್ದು, ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಲಿದೆ. ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿಯೂ (Coronavirus ) ಸಿಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್; ಇಂದು 7 ಸಾವಿರಕ್ಕೂ ಅಧಿಕ ಕೇಸ್ ದಾಖಲು