Site icon Vistara News

DGCA Report: ದೇಶಿ ವಿಮಾನಯಾನ ಪ್ರಯಾಣಿಕರಲ್ಲಿ ಶೇ.25 ಹೆಚ್ಚಳ! ಯಾವೆಲ್ಲ ಕಂಪನಿಗಳಿಗೆ ಲಾಭ?

mumbai airport

ನವದೆಹಲಿ: ಭಾರತದ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆಯು (Domestic Air Passenger Traffic) ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಲ್ಲಿಯವರೆಗೆ ಶೇ.25 ರಷ್ಟು ಹೆಚ್ಚಾಗಿದೆ ಎಂದು ಏವಿಯೇಷನ್ ವಾಚ್‌ಡಾಗ್ ಸಂಸ್ಥೆಯಾಗಿರುವ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA Report) ಹೇಳಿದೆ. ಈ ವರ್ಷದ ಜನವರಿಯಿಂದ ಜುಲೈ ತಿಂಗಳವರೆಗೆ ದೇಶೀಯ ವಿಮಾನಯಾನ ಸಂಸ್ಥೆಗಳು ಕೊಂಡೊಯ್ಯುವ ಪ್ರಯಾಣಿಕರ ಸಂಖ್ಯೆಯು 881.94 ಲಕ್ಷಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಪ್ರಮಾಣವು 669.54 ಲಕ್ಷವಿತ್ತು. ಅಂದರೆ, ಶೇ.24.68ರಿಂದ ಶೇ.31.72ಕ್ಕೆ ಏರಿಕೆಯಾಗಿದೆ ಎಂದು ಡಿಜಿಸಿಎ ಬಿಡುಗಡೆ ಮಾಡಿದ ಅಂಕಿ ಅಂಶಗಳ ವರದಿಯಲ್ಲಿ ತಿಳಿಸಲಾಗಿದೆ.

2023ರ ಜುಲೈ ತಿಂಗಳಲ್ಲಿ ದೇಶಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸಂಬಂಧಿ ಒಟ್ಟು 349 ದೂರುಗಳನ್ನು ಸ್ವೀಕರಿಸಿವೆ ಎಂಬುದು ಡಿಜಿಸಿಎ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. 2023ರ ಜುಲೈ ತಿಂಗಳಲ್ಲಿ ಪ್ರತಿ 10,000 ಪ್ರಯಾಣಿಕರಿಗೆ ದೂರುಗಳ ಸಂಖ್ಯೆ ಪ್ರಮಾಣ ಶೇ. 0.29ರಷ್ಟಿದೆ. ವಿಮಾನದಲ್ಲಿನ ಸಮಸ್ಯೆಗಳೇ ಈ ದೂರುಗಳಿಗೆ ಪ್ರಮುಖ ಕಾರಣವಾಗಿದೆ. ವಿಮಾನಯಾನ ಸಂಸ್ಥೆಗಳು ಒಟ್ಟು 349 ದೂರುಗಳನ್ನು ಸ್ವೀಕರಿಸಿದ್ದು, ಈ ಪೈಕಿ 341 ದೂರುಗಳನ್ನು ಪರಿಹರಿಸಲಾಗಿದೆ ಎಂದು ಡಿಜಿಸಿಎ ವರದಿಯಲ್ಲಿ ತಿಳಿಸಲಾಗಿದೆ.

ಈ ವರ್ಷದ ಜನವರಿಯಿಂದ ಜುಲೈವರೆಗೆ ಇಂಡಿಗೋ 519.91 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ ಶೇ.59 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಆದರೆ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಒಟ್ಟು 81.37 ಲಕ್ಷ ಪ್ರಯಾಣಿಕರನ್ನು ಸಾಗಿಸಿ, ಮಾರುಕಟ್ಟೆಯಲ್ಲಿ ಶೇ.9.2ರಷ್ಟು ಪಾಲನ್ನು ಪಡೆದುಕೊಂಡಿದೆ. ಇದೇ ವೇಳೆ, ಎಐಎಕ್ಸ್ ಕನೆಕ್ಟ್(ಏರ್ ಏಷ್ಯಾ ಇಂಡಿಯಾ) ಒಟ್ಟು 66.79 ಲಕ್ಷ ಪ್ರಯಾಣಿಕರನ್ನು ಸಾಗಿಸಿ, ಮಾರುಕಟ್ಟೆಯಲ್ಲಿ ಶೇ.7.6 ಪಾಲು ಪಡೆದುಕೊಂಡಿದೆ ಎಂದು ಡಿಜಿಸಿಎ ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Air ticket price | ಏರ್‌ ಟಿಕೆಟ್‌ ದರ ನಿಗದಿಯ ಮಿತಿ ಇಂದಿನಿಂದ ರದ್ದು, ವಿಮಾನಯಾನ ಅಗ್ಗ ನಿರೀಕ್ಷೆ

ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಆಕಾಶ್ ಏರ್, 35.22 ಲಕ್ಷ ಪ್ರಯಾಣಿಕರನ್ನು ಸಂಭಾಳಿಸಿ, ಮಾರುಕಟ್ಟೆಯಲ್ಲಿ ಶೇ.5 ಪಾಲು ತನ್ನದಾಗಿಸಿಕೊಂಡಿದೆ. ಅದೇ ರೀತಿ, ಹಲವು ಸವಾಲುಗಳು, ಸಮಸ್ಯೆಗಳ ನಡುವೆಯೇ ಸ್ಪೈಸ್‌ಜೆಟ್ ಸುಮಾರು 51.20 ಲಕ್ಷ ಪ್ರಯಾಣಿಕರನ್ನು ಸಾಗಿಸಿದೆ. ಶೇ.5.8ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇಂಡಿಗೋ ಕೂಡ ಉತ್ತಮ ಪ್ರದರ್ಶನ ತೋರಿದೆ. ತನ್ನ ಕರಾರುವಕ್ಕಾದ ಟೈಮಿಂಗ್ ನಿರ್ವಹಣೆಗೆ ಹೆಸರುವಾಸಿಯಾಗಿರುವ ಇಂಡಿಗೋ 86.8 ಲಕ್ಷ ಪ್ರಯಾಣಿಕರನ್ನುಸಾಗಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version