ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಹಾಕಿ ಇಮೇಲ್ ಮಾಡಿದ್ದ 25ವರ್ಷದ ಯುವಕನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಈತನ ಹೆಸರು ಅಮನ್ ಸಕ್ಸೇನಾ ಎಂದಾಗಿದ್ದು, ಉತ್ತರ ಪ್ರದೇಶದ ಬದೌನ್ ಮೂಲದವನು. ಇಂದು (ನ.27) ಗುಜರಾತ್ನ ಜಾಮ್ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದು, ಈ ವೇಳೆ ಅವರ ಪ್ರಾಣ ತೆಗೆಯುವುದಾಗಿ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಿದ್ದ.
ಅಮನ್ ಸಕ್ಸೇನಾ ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಬಿ.ಟೆಕ್ ಪದವಿ ಪಡೆದವನು. ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಈತ ಬೆದರಿಕೆ ಇಮೇಲ್ ಕಳಿಸಿದ್ದ. ಅದನ್ನು ಕೇಂದ್ರ ಗೃಹ ಇಲಾಖೆ ಗಮನಕ್ಕೆ ತರಲಾಗಿತ್ತು. ಬಳಿಕ ಕೇಂದ್ರ ಗೃಹ ಇಲಾಖೆ ಪ್ರಕರಣದ ತನಿಖೆಯನ್ನು ಗುಜರಾತ್ ಉಗ್ರ ನಿಗ್ರಹ ದಳಕ್ಕೆ (ATS) ವಹಿಸಿತ್ತು. ಬಳಿಕ ಎಟಿಎಸ್ ಅಧಿಕಾರಿಗಳು ತನಿಖೆ ಶುರು ಮಾಡಿ, ಇಮೇಲ್ ಕಳಿಸಿದವನನ್ನು ಟ್ರೇಸ್ ಮಾಡಿದ್ದಾರೆ. ಈತ ಬದೌನ್ದ ಆದರ್ಶನಗರದ ನಿವಾಸಿಯಾಗಿದ್ದು, ಅಲ್ಲಿಯೇ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನನ್ನು ಗುಜರಾತ್ ಪೊಲೀಸ್ ವಶಕ್ಕೆ ಕೊಡಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಬೆದರಿಕೆ ಯಾಕೆ?
ಈ ಸಕ್ಸೇನಾ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಆಪ್ತನಾಗಿದ್ದ ವ್ಯಕ್ತಿಯನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಲು ಇಂಥದ್ದೊಂದು ಉಪಾಯ ಹೂಡಿದ್ದ. ತಾನು ಪ್ರೀತಿಸಿದ ಹುಡುಗಿಗೆ ಇನ್ನೊಬ್ಬ ಆತ್ಮೀಯನಾಗಿದ್ದು ಇವನಲ್ಲಿ ಅಸಮಾಧಾನ ಮೂಡಿಸಿತ್ತು. ಅವನನ್ನು ಹೇಗಾದರೂ ಈ ಪ್ರಕರಣದಲ್ಲಿ ಸಿಲುಕಿಸಿದರೆ ಅವನು ಅರೆಸ್ಟ್ ಆಗುತ್ತಾನೆ ಎಂಬುದು ಸಕ್ಸೇನಾ ಅನಿಸಿಕೆಯಾಗಿತ್ತು. ಹಾಗಾಗಿ ಆ ವ್ಯಕ್ತಿಯ ಮೇಲೆ ಅನುಮಾನ ಬರುವಂತೆಯೇ ಪ್ರಧಾನಿ ಮೋದಿಯವರಿಗೆ ಕಳಿಸಿದ ಜೀವ ಬೆದರಿಕೆ ಪತ್ರದಲ್ಲಿ ಒಕ್ಕಣೆ ಬರೆದಿದ್ದ. ಆ ಇಮೇಲ್ನಲ್ಲಿರುವ ಅಂಶ, ಇಮೇಲ್ ಅಡ್ರೆಸ್ನ್ನು ಪರಿಶೀಲಿಸಿದ್ದ ಎಟಿಎಸ್ ಅಧಿಕಾರಿಗಳು ಎಲ್ಲ ಆಯಾಮದಲ್ಲೂ ತನಿಖೆ ಕೈಗೆತ್ತಿಕೊಂಡಿದ್ದರು. ಕೊನೆಗೂ ನಿಜವಾದ ಆರೋಪಿ ಅಮನ್ ಸಕ್ಸೇನಾ ಬಂಧಿತನಾಗಿದ್ದಾನೆ. ಇನ್ನೂ ಈ ಬೆದರಿಕೆ ಕೇಸ್ನಲ್ಲಿ ಯಾರೆಲ್ಲ ಆರೋಪಿಗಳಿದ್ದಾರೆ ಎಂಬುದನ್ನು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವೈಷ್ಣವ ಜನತೋ ಹಾಡು ಗಾಂಧೀಜಿಗೆ ಅಚ್ಚುಮೆಚ್ಚು, ಆದರೆ…; ಆಡಿಯೊ ಶೇರ್ ಮಾಡಿ, ವಿಶೇಷ ವಿಚಾರ ತಿಳಿಸಿದ ಪ್ರಧಾನಿ ಮೋದಿ!