Site icon Vistara News

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ 2ನೇ ಪತ್ನಿ ಸಾಧನಾ ಗುಪ್ತಾ ನಿಧನ

sadhna gupta

ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ಪತ್ನಿ ಸಾಧನಾ ಗುಪ್ತಾ ಇಂದು ಗುರ್‌ಗಾಂವ್‌ನ ಮೇದಾಂತಾ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಸುದೀರ್ಘ ಅವಧಿಯಿಂದಲೂ ಅವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟ ಕಾರಣ ಮೇದಾಂತ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸಾಧನಾ ಗುಪ್ತಾ ಅವರು ಮುಲಯಾಂ ಸಿಂಗ್‌ ಯಾದವ್‌ ಅವರ ಎರಡನೇ ಪತ್ನಿ. ಇವರ ಪುತ್ರ ಪ್ರತೀಕ್‌ ಯಾದವ್‌ ರಾಜಕೀಯದಿಂದ ದೂರ ಇದ್ದರೆ, ಸೊಸೆ ಅಪರ್ಣಾ ಯಾದವ್‌ ಇತ್ತೀಚೆಗೆಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸಾಧನಾ ಗುಪ್ತಾ ಮುಲಾಯಂ ಸಿಂಗ್‌ ಯಾದವ್‌ ಅವರನ್ನು 2003ರಲ್ಲಿ ವಿವಾಹವಾಗಿದ್ದಾರೆ. ಅವರ ಮೊದಲ ಪತ್ನಿ ಮಾಲ್ತಿ ದೇವಿ ನಿಧನರಾದ ಕೆಲವೇ ದಿನದಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಧನಾ ಗುಪ್ತಾ ಪತಿ ಮುಲಾಯಂ ಅವರಿಗಿಂತಲೂ ಸುಮಾರು 20ವರ್ಷ ಚಿಕ್ಕವರು. ಅಂದರೆ ಅವರ ವಯಸ್ಸು ಈಗ 60ರ ಆಸುಪಾಸಿನಲ್ಲಿದೆ.

ಸಾಧನಾರಿಗೂ ಮುಲಾಯಂ ಎರಡನೇ ಪತಿ
ಸಾಧನಾ ಗುಪ್ತಾ ಮೂಲತಃ ಉತ್ತರ ಪ್ರದೇಶದ ಎಟಾವಾದ ಬಿಧುನಾ ಎಂಬ ಪ್ರದೇಶದವರು. ಅವರಿಗೆ ಮುಲಾಯಂ ಸಿಂಗ್‌ ಯಾದವ್‌ ಎರಡನೇ ಪತಿ. ಇವರ ಮೊದಲ ಪತಿ ಫಾರುಖಾಬಾದ್‌ನ ಚಂದ್ರಪ್ರಕಾಶ್‌ ಗುಪ್ತಾ ಎಂಬುವರು. 1986ರ ಜುಲೈ 4ರಲ್ಲಿ ಸಾಧನಾ ಮತ್ತು ಚಂದ್ರಪ್ರಕಾಶ್‌ ಗುಪ್ತಾ ವಿವಾಹ ನಡೆಯುತ್ತದೆ. ಈ ದಂಪತಿಗೆ 1987ರಲ್ಲಿ ಪ್ರತೀಕ್‌ ಹುಟ್ಟುತ್ತಾರೆ. ಅದಾಗಿ ಎರಡೇ ವರ್ಷಕ್ಕೆ ಇವರಿಬ್ಬರೂ ಬೇರೆಯಾಗುತ್ತಾರೆ. ನಂತರ ಸಾಧನಾ ಅವರು ಮುಲಾಯಂ ಸಿಂಗ್‌ ಯಾದವ್‌ ಅವರ ತಾಯಿಗೆ ಅನಾರೋಗ್ಯವಾದಾಗ ಆರೈಕೆಗೆಂದು ಬರುತ್ತಾರೆ. ಆ ಸಮಯದಲ್ಲಿ ಇವರಿಬ್ಬರೂ ಆತ್ಮೀಯರಾಗುತ್ತಾರೆ. ಮುಂದೆ ಮುಲಾಯಾಂ ತನ್ನ ಮೊದಲ ಪತ್ನಿ ತೀರಿದ ಬಳಿಕ ಸಾಧನಾರನ್ನು ವಿವಾಹವಾಗುತ್ತಾರೆ.

ಇದನ್ನೂ ಓದಿ: ವಂಶ ರಾಜಕಾರಣಕ್ಕೀಗ ಕೆಟ್ಟಕಾಲ; ರಾಜರಂತೆ ಮೆರೆದಿದ್ದ ಅಪ್ಪ-ಮಕ್ಕಳ ಪಕ್ಷಗಳೆಲ್ಲ ಮೂಲೆಗುಂಪು!

Exit mobile version