Site icon Vistara News

ಅಮ್ರೀನ್​ ಭಟ್​, ರಾಹುಲ್ ಭಟ್​ ಹತ್ಯೆ ಆರೋಪಿ ಸೇರಿ ಮೂವರು ಉಗ್ರರು ಟ್ರ್ಯಾಪ್‌​

Jammu Kashmir

ಶ್ರೀನಗರ: ಜಮ್ಮು-ಕಾಶ್ಮಿರದ ಸರ್ಕಾರಿ ಉದ್ಯೋಗಿ ರಾಹುಲ್​ ಭಟ್​ ಮತ್ತು ಗಾಯಕಿ ಅಮ್ರೀನ್​ ಭಟ್​​ ಹಂತಕ ಸೇರಿ, ಲಷ್ಕರೆ ತೊಯ್ಬಾ ಸಂಘಟನೆಗೆ (LeT Terrorists) ಸೇರಿದ ಒಟ್ಟು ಮೂವರು ಭಯೋತ್ಪಾದಕರನ್ನು ಇಂದು ಜಮ್ಮು-ಕಾಶ್ಮೀರದ ಬಡ್​​ಗಾಂವ್​​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮಿರದ ಖಾನಾಸಾಹಿಬ್​ ಎಂಬಲ್ಲಿನ ವಾಟರ್​​ರ್ಹೈಲ್​​ನಲ್ಲಿ ಉಗ್ರರು ಇರುವ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು. ಸ್ಥಳವನ್ನು ಸಂಪೂರ್ಣವಾಗಿ ಸುತ್ತುವರಿದಿದ್ದರು.

ಈ ಬಗ್ಗೆ ಕಾಶ್ಮೀರದ ಎಡಿಜಿಪಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಲಷ್ಕರೆ ತೊಯ್ಬಾ (ಟಿಆರ್​ಎಫ್​)ದ ಮೂವರು ಉಗ್ರರನ್ನು ಬಂಧಿಸಲಾಗಿದೆ. ಅದರಲ್ಲಿ ಲತೀಫ್​​ ರಾಥರ್​ ಕೂಡ ಸಿಕ್ಕಿಬಿದ್ದಿದ್ದಾನೆ. ಈತ ರಾಹುಲ್​ ಭಟ್​ ಮತ್ತು ಅಮ್ರೀನ್​ ಭಟ್​ ಹತ್ಯೆ ಪ್ರಕರಣದ ನೇರ ಆರೋಪಿ ಎಂದಿದ್ದಾರೆ.

ಅಮ್ರೀನ್​ ಭಟ್​ ಮತ್ತು ರಾಹುಲ್ ಭಟ್​ ಹತ್ಯೆ
ಅಮ್ರೀನ್​ ಭಟ್​ ಜಮ್ಮು-ಕಾಶ್ಮೀರದ ಪ್ರಸಿದ್ಧ ಗಾಯಕಿ. ಟಿವಿ ಕಲಾವಿದೆಯೂ ಹೌದು. ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂ ಮೂಲಕ ತುಂಬ ಪ್ರಸಿದ್ಧಿ ಪಡೆದಿದ್ದರು. ಟಿಕ್​​ಟಾಕ್​ ಮೂಲಕವೂ ಫೇಮಸ್​ ಆಗಿದ್ದರು. 2022ರ ಮೇ ತಿಂಗಳಲ್ಲಿ ಲಷ್ಕರೆ ತೊಯ್ಬಾದ ಉಗ್ರರಿಂದ ಹತ್ಯೆಗೀಡಾಗಿದ್ದರು. ಆಗ ಅಮ್ರೀನ್​​ರಿಗೆ ಇನ್ನೂ 35ವರ್ಷ. ಲಷ್ಕರೆ ತೊಯ್ಬಾದ ಉಗ್ರರು ತಮ್ಮ ಸಂಘಟನೆಗೆ ಸೇರಿದ ಒಬ್ಬನ ವಿವಾಹ ಸಮಾರಂಭದಲ್ಲಿ ಬಂದು ಹಾಡುವಂತೆ ಅಮ್ರೀನ್​ ಭಟ್​​ರಿಗೆ ಕೇಳಿದ್ದರು. ಆದರೆ ಆಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಉಗ್ರರು, ಅಮ್ರೀನ್​ ಮನೆಗೇ ಬಂದು ಗುಂಡು ಹಾರಿಸಿದ್ದರು.

ಹಾಗೇ, ರಾಹುಲ್​ ಭಟ್​​ ಕೂಡ ಉಗ್ರರ ಗುಂಡಿಗೆ ಬಲಿಯಾಗುವಾಗ ಅವರಿಗೆ 35 ವರ್ಷ. ಕಂದಾಯ ಇಲಾಖೆಯಲ್ಲಿ ಕ್ಲರ್ಕ್​ ಆಗಿದ್ದರು. ಇವರಿಗೆ ಉಗ್ರರು ಮೂರು ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದರು. ರಾಹುಲ್ ಭಟ್ ಹತ್ಯೆ ಖಂಡಿಸಿ ಜಮ್ಮು-ಕಾಶ್ಮೀರದಲ್ಲಿ ಮೂರ್ನಾಲ್ಕು ದಿನ ಅಲ್ಪಸಂಖ್ಯಾತ ಸಮುದಾಯದವರು ಉಗ್ರ ಪ್ರತಿಭಟನೆ ನಡೆಸಿದ್ದರು. ಅಂದಹಾಗೇ, ಈ ಹತ್ಯೆ ನಡೆದಿದ್ದು 2022ರ ಮೇ 12ರಂದು.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌; ಪಾಕಿಸ್ತಾನದ ಇಬ್ಬರು ಸೇರಿ 4 ಭಯೋತ್ಪಾದಕರ ಹತ್ಯೆ

Exit mobile version