ಶ್ರೀನಗರ: ಜಮ್ಮು-ಕಾಶ್ಮೀರದ ಬಡ್ಗಾಂವ್ ಜಿಲ್ಲೆಯಲ್ಲಿ ಇಂದು ನಡೆದ ಎನ್ಕೌಂಟರ್ನಲ್ಲಿ ಲಷ್ಕರೆ ತೊಯ್ಬಾದ ಮೂವರು ಉಗ್ರರನ್ನು ಇಂದು ರಕ್ಷಣಾ ಪಡೆ ಸಿಬ್ಬಂದಿ ಹತ್ಯೆಗೈದಿದ್ದಾರೆ. ಇಂದು ಬಲಿಯಾದ ಉಗ್ರರಲ್ಲಿ, ಇದೇ ವರ್ಷದ ಮೇ ತಿಂಗಳಲ್ಲಿ ಸರ್ಕಾರಿ ಉದ್ಯೋಗಿ ರಾಹುಲ್ ಭಟ್ ಮತ್ತು ಸುಪ್ರಸಿದ್ಧ ಗಾಯಕಿ ಅಮ್ರೀನ್ ಭಟ್ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಉಗ್ರ ಲತೀಫ್ ರಾಥರ್ ಕೂಡ ಸೇರಿದ್ದಾನೆ.
ಬಡ್ಗಾಂವ್ನ ಖಾನಾಸಾಹಿಬ್ ಏರಿಯಾದಲ್ಲಿರುವ ವಾಟರ್ಹೈಲ್ನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಮುಂಜಾನೆಯಿಂದಲೇ ಆ ಪ್ರದೇಶವನ್ನು ಸುತ್ತುವರಿದಿದ್ದರು. ಆದರೆ ಭಯೋತ್ಪಾದಕರು ತಮ್ಮನ್ನು ರಕ್ಷಿಸಿಕೊಳ್ಳು ಭದ್ರತಾ ಪಡೆಗಳತ್ತ ಗುಂಡು ಹಾರಿಸಲು ಶುರು ಮಾಡಿದಾಗ, ಇವರೂ ಕೂಡ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಬೆಳಗ್ಗೆ ಮೂವರೂ ಭಯೋತ್ಪಾದಕರನ್ನು ಟ್ರ್ಯಾಪ್ ಮಾಡಿದ್ದರು.
ಹೀಗೆ ಟ್ರ್ಯಾಪ್ ಆದ ಭಯೋತ್ಪಾದಕರಲ್ಲಿ ಲತೀಫ್ ಕೂಡ ಇದ್ದಾನೆ. ಈತ ರಾಹುಲ್ ಭಟ್ ಮತ್ತು ಅಮ್ರೀನ್ ಭಟ್ ಹತ್ಯೆಯ ಆರೋಪಿ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದರು. ಇಂದು ಹತ್ಯೆಯಾದ ಮೂವರೂ, ಹಲವು ಉಗ್ರಕೃತ್ಯಗಳನ್ನು ನಡೆಸಿದ್ದಾರೆ. ಅನೇಕ ನಾಗರಿಕರನ್ನು ಕೊಂದಿದ್ದಾರೆ ಎಂದೂ ತಿಳಿಸಿದ್ದರು. ಅದಾಗಿ ಕೆಲವೇ ಹೊತ್ತಲ್ಲಿ ಮತ್ತೆ ಟ್ವೀಟ್ ಮಾಡಿದ ವಿಜಯ್ ಕುಮಾರ್, ‘ಅಡಗಿದ್ದ ಮೂವರೂ ಭಯೋತ್ಪಾದಕರನ್ನೂ ಹತ್ಯೆ ಮಾಡಲಾಗಿದೆ. ಅವರ ಬಳಿಯಿದ್ದ ಮಾರಕ ಅಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ. ಇದು ನಮ್ಮ ಪಾಲಿಗೆ ದೊಡ್ಡ ಯಶಸ್ಸು’ ಎಂದು ಹೇಳಿದ್ದರು.
ಅಮ್ರೀನ್ ಭಟ್ ಮತ್ತು ರಾಹುಲ್ ಭಟ್ ಹತ್ಯೆ
ಅಮ್ರೀನ್ ಭಟ್ ಜಮ್ಮು-ಕಾಶ್ಮೀರದ ಪ್ರಸಿದ್ಧ ಗಾಯಕಿ. ಟಿವಿ ಕಲಾವಿದೆಯೂ ಹೌದು. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಮೂಲಕ ತುಂಬ ಪ್ರಸಿದ್ಧಿ ಪಡೆದಿದ್ದರು. ಟಿಕ್ಟಾಕ್ ಮೂಲಕವೂ ಫೇಮಸ್ ಆಗಿದ್ದರು. 2022ರ ಮೇ ತಿಂಗಳಲ್ಲಿ ಲಷ್ಕರೆ ತೊಯ್ಬಾದ ಉಗ್ರರಿಂದ ಹತ್ಯೆಗೀಡಾಗಿದ್ದರು. ಆಗ ಅಮ್ರೀನ್ರಿಗೆ ಇನ್ನೂ 35ವರ್ಷ. ಲಷ್ಕರೆ ತೊಯ್ಬಾದ ಉಗ್ರರು ತಮ್ಮ ಸಂಘಟನೆಗೆ ಸೇರಿದ ಒಬ್ಬನ ವಿವಾಹ ಸಮಾರಂಭದಲ್ಲಿ ಬಂದು ಹಾಡುವಂತೆ ಅಮ್ರೀನ್ ಭಟ್ರಿಗೆ ಕೇಳಿದ್ದರು. ಆದರೆ ಆಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಉಗ್ರರು, ಅಮ್ರೀನ್ ಮನೆಗೇ ಬಂದು ಗುಂಡು ಹಾರಿಸಿದ್ದರು.
ಹಾಗೇ, ರಾಹುಲ್ ಭಟ್ ಕೂಡ ಉಗ್ರರ ಗುಂಡಿಗೆ ಬಲಿಯಾಗುವಾಗ ಅವರಿಗೆ 35 ವರ್ಷ. ಕಂದಾಯ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. ಇವರಿಗೆ ಉಗ್ರರು ಮೂರು ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದರು. ರಾಹುಲ್ ಭಟ್ ಹತ್ಯೆ ಖಂಡಿಸಿ ಜಮ್ಮು-ಕಾಶ್ಮೀರದಲ್ಲಿ ಮೂರ್ನಾಲ್ಕು ದಿನ ಅಲ್ಪಸಂಖ್ಯಾತ ಸಮುದಾಯದವರು ಉಗ್ರ ಪ್ರತಿಭಟನೆ ನಡೆಸಿದ್ದರು. ಅಂದಹಾಗೇ, ಈ ಹತ್ಯೆ ನಡೆದಿದ್ದು 2022ರ ಮೇ 12ರಂದು.
ಇದನ್ನೂ ಓದಿ: Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್ ಭಯೋತ್ಪಾದಕ ಬಂಧನ