ಶ್ರೀ ರಾಮಮಂದಿರ (Ram Temple) ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ರಸ್ತೆಗಳೂ ಕೂಡ ಸ್ಮಾರ್ಟ್ ಆಗುತ್ತಿವೆ. ಅಯೋಧ್ಯೆಯನ್ನು ಸಂಪೂರ್ಣ ಅಧ್ಯಾತ್ಮ-ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವುದಾಗಿ ಹೇಳಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದಾರೆ. ಶ್ರೀ ರಾಮಮಂದಿರವನ್ನು ಸಂಪರ್ಕಿಸುವ ಮೂರು ಪ್ರಮುಖ ರಸ್ತೆಗಳಲ್ಲಿರುವ ಎಲ್ಲ ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಕಟ್ಟಡಗಳ ಮುಂಭಾಗವನ್ನು ಏಕರೂಪವಾಗಿ ಬದಲಾಯಿಸಲು ಯೋಗಿ ಸರ್ಕಾರ ಮುಂದಾಗಿದೆ. ಹೀಗೆ ಎಲ್ಲ ಕಟ್ಟಡಗಳ ಎದುರಿನ ಭಾಗವನ್ನು ಒಂದೇ ತೆರನಾಗಿ ಮಾಡುವ ಮೂಲಕ, ರಸ್ತೆ ಸೌಂದರ್ಯ ಹೆಚ್ಚಿಸುವುದು ಯುಪಿ ಸರ್ಕಾರದ ತೀರ್ಮಾನವಾಗಿದ್ದು, ಅದಕ್ಕಾಗಿ 32 ಕೋಟಿ ರೂಪಾಯಿ ವ್ಯಯಿಸಲು ಮುಂದಾಗಿದೆ.
ಶ್ರೀರಾಮಮಂದಿರವನ್ನು ಸಂಪರ್ಕಿಸುವ ಮೂರು ರಸ್ತೆಗಳಲ್ಲಿರುವ ವಸತಿ/ವಾಣಿಜ್ಯ ಕಟ್ಟಡಗಳ ಮುಂಭಾಗವನ್ನು ಏಕ ರೂಪಗೊಳಿಸುವ ಸಂಬಂಧ ದಾಖಲೆ ಕೂಡ ರಚಿಸಲಾಗಿದೆ. ಈ ಮೂರು ದಾರಿಗಳು ಸೇರಿದರೆ ಒಟ್ಟು 13 ಕಿಮೀ ದೂರ ಇದೆ. ಒಂದು ರಾಮ ಪಥ, ಇನ್ನೊಂದು ರಾಮ ಜನ್ಮಭೂಮಿ ಪಥ ಹಾಗೂ ಮತ್ತೊಂದು ಭಕ್ತಿ ಪಥವೆಂದು ಹೆಸರಿಸಲಾಗಿದೆ. ಇಲ್ಲಿನ ಶ್ರೀರಾಮಮಂದಿರ ಮತ್ತು ಇತರ ಪ್ರವಾಸಿ ತಾಣಗಳನ್ನು ನೋಡಲು ಬರುವ ಪ್ರವಾಸಿಗರಿಗೆ/ಯಾತ್ರಾರ್ಥಿಗಳಿಗೆ ಈ ಸಂಪೂರ್ಣ ಸ್ಥಳದ ನೋಟ ಆಹ್ಲಾದಕರ ಎನ್ನಿಸಬೇಕು. ಹೀಗಾಗಿ ಈ ಮೂರು ರಸ್ತೆಯ ಮೂಂಭಾಗದಲ್ಲಿರುವ ಎಲ್ಲ ವಾಣಿಜ್ಯ/ವಸತಿ ಕಟ್ಟಡಗಳ ಮುಂಭಾಗವನ್ನು ಏಕರೂಪಗೊಳಿಸಲು ನಿರ್ಧರಿಸಲಾಗಿದೆ ಎಂದು ಡಾಕ್ಯುಮೆಂಟ್ನಲ್ಲಿ ಹೇಳಲಾಗಿದೆ. ಅಯೋಧ್ಯಾ ಪಟ್ಟಣದ ಬೀದಿಯಲ್ಲಿ ಎತ್ತರದ ಕಮಾನುಗಳನ್ನು ಹಾಕಲಾಗುವುದು. ಅಂಗಡಿಗಳು, ಮನೆ/ಕಟ್ಟಡಗಳ ಕಿಟಕಿಗಳ ಶೈಲಿಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ಆಕರ್ಷಕ ಬೀದಿದೀಪಗಳ ಅಳವಡಿಕೆ ಮಾಡಲಾಗುವುದು ಎಂದೂ ತಿಳಿಸಲಾಗಿದೆ.
ಇದನ್ನೂ ಓದಿ: Viral Video | ಅಯೋಧ್ಯಾ ಜೈಲಿಂದ ಬಿಡುಗಡೆಯಾದ 98ರ ವೃದ್ಧನಿಗೆ, ಸನ್ಮಾನಿಸಿ ಬೀಳ್ಕೊಟ್ಟ ಪೊಲೀಸ್