Site icon Vistara News

ಛತ್ತೀಸ್​ಗಢ್​​ನ ಸುಕ್ಮಾದಲ್ಲಿ ಮೂವರು ಪೊಲೀಸರನ್ನು ಹತ್ಯೆಗೈದ ನಕ್ಸಲರು; ಹೊಂಚು ಹಾಕಿ ದಾಳಿ ಮಾಡಿದ ದುಷ್ಟರು

3 security personnel Killed By Naxals in Chhattisgarh

#image_title

ಛತ್ತೀಸ್​ಗಢ್​​ನ ಸುಕ್ಮಾದಲ್ಲಿ ನಕ್ಸಲರ ದಾಳಿಗೆ, ಜಿಲ್ಲಾ ಮೀಸಲು ಪಡೆ (DRG)ಯ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ಸೇರಿ ಮೂವರು ಹತರಾಗಿದ್ದಾರೆ. ಸುಕ್ಮಾ ಸದಾ ನಕ್ಸಲ್​ ಪೀಡಿತ ಪ್ರದೇಶವಾಗಿದೆ (Naxals in Chhattisgarh). ಇಲ್ಲಿನ ಜಾಗರ್​ಗುಂಡಾ ಮತ್ತು ಕುಂಡೇಡ್​​ ಪ್ರದೇಶಗಳ ನಡುವಿನ ಸ್ಥಳದಲ್ಲಿ ಇಂದು ಬೆಳಗ್ಗೆ 9ಗಂಟೆ ಹೊತ್ತಿಗೆ ಭದ್ರತಾ ಪಡೆ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್​ಕೌಂಟರ್​ ನಡೆದಿತ್ತು. ಈ ವೇಳೆ ಡಿಆರ್​ಜಿಯ ಮೂವರು ಪೊಲೀಸರು ಹತ್ಯೆಯಾಗಿದ್ದಾರೆ ಎಂದು ಬಸ್ತಾರ್​ ವಲಯದ ಐಜಿ ಪಿ.ಸುಂದರ್​ರಾಜ್​ ತಿಳಿಸಿದ್ದಾರೆ. ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ರಾಮುರಾಮ್​ ನಾಗ್​, ಸಹಾಯಕ ಕಾನ್​ಸ್ಟೆಬಲ್​ ಕುಂಜಮ್​ ಜೋಗಾ ಮತ್ತು ಸೈನಿಕ್​ ವಂಜಮ್ ಭೀಮಾ ಮೃತರು.

ಘಟನೆ ಬಗ್ಗೆ ವಿವರಿಸಿದ ಐಜಿ ಸುಂದರ್​ರಾಜ್​ ‘ಇಂದು ಮುಂಜಾನೆ ಜಾಗರ್​ಗುಂಡಾ ಮತ್ತು ಕುಂಡೇಡ್​ ನಡುವೆ ನಕ್ಸಲರು ಇರುವುದಾಗಿ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ನಮ್ಮ ರಕ್ಷಣಾ ತಂಡ ಅಲ್ಲಿಗೆ ಹೋಗಿತ್ತು. ಪೊಲೀಸ್ ಸಿಬ್ಬಂದಿ ನಕ್ಸಲರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಅವರು ಹೊಂಚು ಹಾಕಿ ದಾಳಿ ಮಾಡಿದ್ದಾರೆ. ಈ ಎನ್​ಕೌಂಟರ್​ನಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನು ನಮ್ಮ ಪೊಲೀಸ್ ಪಡೆ ನಕ್ಸಲರ ಮೇಲೆ ಪ್ರತಿದಾಳಿ ನಡೆಸಿದೆ. ಆದರೆ ಅವರ ಕಡೆ ಯಾರಾದರೂ ಸತ್ತಿದ್ದಾರಾ? ಗಾಯಗೊಂಡವರು ಎಷ್ಟು ಮಂದಿ ಎಂಬ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ’ ಎಂದು ತಿಳಿಸಿದ್ದಾರೆ.

ದೇಶದಲ್ಲಿ 2024ರ ಲೋಕಸಭೆ ಚುನಾವಣೆ ಪೂರ್ವ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಅವರು ಈಗೊಂದು ತಿಂಗಳ ಹಿಂದೆ ಹೇಳಿದ್ದರು. ಅದರಂತೆ ಛತ್ತೀಸ್​ಗಢ, ಜಾರ್ಖಂಡ್ ಸೇರಿ ಎಲ್ಲ ನಕ್ಸಲ್​ ಪೀಡಿತ ಪ್ರದೇಶಗಳಲ್ಲೂ ಚುರುಕಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರನ್ನು ಬಂಧಿಸಲಾಗುತ್ತಿದೆ. ಅವರ ಮೇಲೆ ವೈಮಾನಿಕ ದಾಳಿಯನ್ನೂ ಮಾಡಲಾಗುತ್ತಿದೆ. ಆದರೆ ಮತ್ತೊಂದೆಡೆ ನಕ್ಸಲರ ಉಪಟಳವೂ ಹೆಚ್ಚುತ್ತಿದೆ. ಛತ್ತೀಸ್​ಗಢ್​ನಲ್ಲಿ ನಾರಾಯಣಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಾಗರ್ ಸಾಹುನನ್ನು ಫೆ.10ರಂದು ನಕ್ಸಲರು ಕೊಂದಿದ್ದರು. ಮರುದಿನ ಫೆ.11ರಂದು ಮಾಜಿ ಸರ್​ಪಂಚ್​ ರಾಮಧರ್ ಅಲಾಮಿ ಎಂಬುವರನ್ನು ಹತ್ಯೆಗೈದಿದ್ದರು. ಅದಕ್ಕೂ ಪೂರ್ವ ಫೆ.5ರಂದು ಬಿಜಾಪುರದ ಅವಾಪಲ್ಲಿ ಮಂಡಲ್​ ಬಿಜೆಪಿ ಮುಖ್ಯಸ್ಥ ನೀಲಕಾಂತ್ ಕಾಕೇಮ್​ ಕೂಡ ನಕ್ಸಲರ ಗುಂಡಿಗೆ ಬಲಿಯಾಗಿದ್ದರು.

ಇದನ್ನೂ ಓದಿ: Maoists Killed BJP Leader: ಕುಟುಂಬಸ್ಥರ ಎದುರೇ ಬಿಜೆಪಿ ನಾಯಕನ ಶಿರಚ್ಛೇದ ಮಾಡಿದ ನಕ್ಸಲರು

Exit mobile version