ಮುಂಬಯಿಗೆ ಪಾಕಿಸ್ತಾನದಿಂದ ಮೂವರು ಉಗ್ರರು ಆಗಮಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಶನಿವಾರ ಮುಂಬಯಿ ಪೊಲೀಸ್ ಕಂಟ್ರೋಲ್ ರೂಮ್ಗೆ ಅಪರಿಚಿತ ನಂಬರ್ನಿಂದ ಕರೆಯೊಂದು ಬಂದಿದೆ. ಅದರಲ್ಲಿ ಮಾತನಾಡಿದಾತ ಈ ವಿಷಯವನ್ನು ತಿಳಿಸಿದ್ದಾನೆ. ‘ಮೂವರು ಉಗ್ರರು ಪಾಕಿಸ್ತಾನದಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಬಂದಿದ್ದಾರೆ. ಅದರಲ್ಲಿ ಒಬ್ಬಾತನ ಹೆಸರು ಮುಜೀಬ್ ಸಯ್ಯದ್’ ಎಂದು ಹೇಳಿರುವ ಆ ಅಪರಿಚಿತ ಮುಜೀಬ್ನ ಫೋನ್ನಂಬರ್, ವಾಹನ ಸಂಖ್ಯೆಯನ್ನೆಲ್ಲ ಪೊಲೀಸರಿಗೆ ಒದಗಿಸಿದ್ದಾನೆ. ಆದರೆ ತಾನ್ಯಾರು ಎಂಬುದನ್ನು ಮಾತ್ರ ಹೇಳದೆ ಕರೆ ಕಟ್ ಮಾಡಿದ್ದಾನೆ. ಸದ್ಯ ಪೊಲೀಸರು ಆ ನಂಬರ್ನ್ನು ಟ್ರೇಸ್ ಮಾಡುತ್ತಿದ್ದಾರೆ. ತನಿಖೆಯನ್ನೂ ಪ್ರಾರಂಭಿಸಿದ್ದಾರೆ. ಇದೊಂದು ಸುಳ್ಳು ಕರೆ ಆಗಿರಬಹುದು ಎಂದು ಅಂದಾಜಿಸಿದ್ದಾರೆ. ಹಾಗಿದ್ದಾಗ್ಯೂ..ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ದೇಶದ ವಾಣಿಜ್ಯ ನಗರವೆನ್ನಿಸಿರುವ ಮುಂಬಯಿಗೆ ಉಗ್ರ ಬೆದರಿಕೆ ಹೊಸದಲ್ಲ. ಅದರಲ್ಲೂ 2008ರ ನವೆಂಬರ್ 26ರಂದು ಮುಂಬಯಿಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ, ಒಬೆರಾಯ್ ಟ್ರೈಡೆಂಟ್, ತಾಜ್ ಪ್ಯಾಲೇಸ್ ಹೋಟೆಲ್ ಮತ್ತು ಟವರ್ ಸೇರಿ 12 ಪ್ರದೇಶಗಳ ಮೇಲೆ ಲಷ್ಕರೆ ತೊಯ್ಬಾ ಉಗ್ರರು ಭೀಕರ ದಾಳಿ ನಡೆಸಿದ್ದರು. ಅಂದು ಸಮುದ್ರ ಮಾರ್ಗದ ಮೂಲಕ ಬಂದಿದ್ದ 10 ಉಗ್ರರು ನಡೆಸಿದ್ದ ದಾಳಿಯಲ್ಲಿ ಭಾರತದ ಭದ್ರತಾ ಸಿಬ್ಬಂದಿ, ನಾಗರಿಕರು, ವಿದೇಶಿ ಪ್ರವಾಸಿಗರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಾಗೇ, ನಮ್ಮ ಭದ್ರತಾ ಪಡೆಗಳ ದಾಳಿಗೆ 9 ದಾಳಿಕೋರರು ಬಲಿಯಾಗಿದ್ದಾರೆ. ಮತ್ತೊಬ್ಬ ಉಗ್ರನನ್ನು ಹಿಡಿದು ಗಲ್ಲಿಗೇರಿಸಲಾಗಿದೆ.
ಇದನ್ನೂ ಓದಿ: 26/11ರ ಮುಂಬಯಿ ದಾಳಿಯನ್ನು ನೆನಪಿಸುವಂತೆ ಗುಜರಾತ್ ಕರಾವಳಿ ತೀರಕ್ಕೆ ಬಂದ ಪಾಕಿಸ್ತಾನಿ ಬೋಟ್; 10 ಮಂದಿ ಅರೆಸ್ಟ್
ಅದಾದ ಮೇಲೆ ಕೂಡ ಮುಂಬಯಿಗೆ ಪದೇಪದೆ ಉಗ್ರದಾಳಿಯ ಬೆದರಿಕೆ ಎದುರಾಗುತ್ತಲೇ ಇದೆ. ಈಗೆರಡು ತಿಂಗಳ ಹಿಂದೆ ಫೆಬ್ರವರಿಯಲ್ಲಿ ತಾಲಿಬಾನ್ ಉಗ್ರ ಎಂದು ಹೇಳಿಕೊಂಡವನೊಬ್ಬ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ಇಮೇಲ್ ಸಂದೇಶ ಕಳಿಸಿ ಮುಂಬಯಿ ಮೇಲೆ ದಾಳಿ ಮಾಡುವುದಾಗಿ ಹೇಳಿದ್ದ. ಎನ್ಐಎ ತನಿಖಾ ದಳ ಇದನ್ನು ಪೊಲೀಸರ ಗಮನಕ್ಕೆ ತಂದಿತ್ತು. ಅದಕ್ಕೂ ಮೊದಲು 2022ರಲ್ಲಿ ಕೂಡ ಮುಂಬಯಿ ಮೇಲೆ ದಾಳಿ ನಡೆಸುವುದಾಗಿ ಉಗ್ರರು ಬೆದರಿಕೆ ಹಾಕಿದ್ದರು.