Site icon Vistara News

Tragic Friday | ಶುಕ್ರವಾರ ಬೆಳ್ಳಂಬೆಳಗ್ಗೆ ಮನಸನ್ನು ಕದಡಿದ ಮೂರು ಕಹಿ ಘಟನೆಗಳು ಇವು

3 Tragic incidents Of Friday

ಮುಂಜಾನೆ ಎದ್ದು ಇಂಟರ್​ನೆಟ್​, ನ್ಯೂಸ್​ ಚಾನೆಲ್​ ಆನ್​ ಮಾಡಿದ ನಾವಿಂದು ಒಂದರ ಬೆನ್ನಿಗೆ ಒಂದರಂತೆ ಕಹಿ ಸುದ್ದಿಗಳನ್ನು ಕೇಳಿದ್ದೇವೆ. ಇಂದು ಇಂಟರ್​​ನೆಟ್​​ನಲ್ಲಿ ಆ ಮೂರು ಸುದ್ದಿಗಳು ಟ್ರೆಂಡ್​ ಸೃಷ್ಟಿಸಿವೆ. ಈ ವಿಷಾದನೀಯ ಘಟನೆಗಳ ಬಗ್ಗೆ ವಿವಿಧ ಕ್ಷೇತ್ರಗಳ ಗಣ್ಯರು, ಜಾಗತಿಕ ಪ್ರಮುಖರು, ಸಾಮಾನ್ಯ ಜನರು ಸೋಷಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​ ಹಾಕುತ್ತಿದ್ದಾರೆ. ಇಲ್ಲಿವೆ ನೋಡಿ ಶುಕ್ರವಾರ ಬೆಳ್ಳಂಬೆಳಗ್ಗೆಯೇ ಅನೇಕರ ಮನಸನ್ನು ಭಾರ ಗೊಳಿಸಿದ ಮೂರು ಘಟನೆಗಳು…

ಪ್ರಧಾನಿ ನರೇಂದ್ರ ಮೋದಿ ತಾಯಿ ಮರಣ
ಪ್ರಧಾನಿ ನರೇಂದ್ರ ಮೋದಿವಯರ ತಾಯಿ ಹೀರಾಬೆನ್​ ಇಂದು ಮುಂಜಾನೆ 3.30ಕ್ಕೆ ನಿಧನರಾದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹೀರಾಬೆನ್​ ಬುಧವಾರ ಅಹ್ಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯಕ್ಕೀಡಾದ ತಾಯಿಯನ್ನು ನೋಡಲು ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಇನ್ನೇನು ಅವರ ಆರೋಗ್ಯ ಸರಿಹೋಯಿತು, ಡಿಸ್​ಚಾರ್ಜ್​ ಆಗುತ್ತಾರೆ ಎಂದು ಹೇಳಲಾಗಿತ್ತು. ಮೋದಿಯವರೂ ಸಹ ವಾಪಸ್​ ದೆಹಲಿಗೆ ತೆರಳಿದ್ದರು. ಆದರೆ ಇಂದು ಮುಂಜಾನೆ ಸೂರ್ಯಮೂಡುವ ಹೊತ್ತಿಗೆ ‘ಪ್ರಧಾನಿ ಮೋದಿ ತಾಯಿ ಹೀರಾಬೆನ್​ ಇನ್ನಿಲ್ಲ’ ಎಂಬ ಸುದ್ದಿ ಬಂದಿತ್ತು. ಮಗ ದೇಶದ ಪ್ರಧಾನಿಯಾಗಿದ್ದರೂ ಅತ್ಯಂತ ಸರಳವಾಗಿ, ಮುಗ್ಧವಾಗಿ ಬದುಕಿದ ಶತಾಯುಷಿ ಅಮ್ಮನ ಮರಣಕ್ಕೆ ಇಡೀ ದೇಶ ಮರುಗಿದೆ. ಜಗತ್ತಿನ ಪ್ರಮುಖರೂ ಸಂತಾಪ ಸೂಚಿಸಿದ್ದಾರೆ.

ಫುಟ್ಬಾಲ್​ ದಿಗ್ಗಜ ಪೀಲೆ ನಿಧನ
ಫುಟ್ಬಾಲ್​ ಲೋಕದ ದೇವರು ಎಂದೇ ಹೆಸರುಮಾತಾಗಿದ್ದ, ಇಡೀ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬ್ರೆಜಿಲ್​ ಫುಟ್ಬಾಲ್​ ಆಟಗಾರ ಪೀಲೆ (ಎಡ್ಸನ್​ ಅರಂಟೆಸ್​ ಡೊ ನಾಸಿಮೆಂಟೋ) ನಿಧನರಾಗಿದ್ದಾರೆ ಎಂಬ ಸುದ್ದಿ ಮಧ್ಯರಾತ್ರಿಯಿಂದ ಹರಿದಾಡಿ, ಬೆಳಗ್ಗೆ ಜಗತ್ತು ಏಳುವ ಹೊತ್ತಿಗೆ ಪ್ರತಿಮನೆಯ ಬಾಗಿಲು ತಲುಪಿತ್ತು. ಕರುಳಿನ ಕ್ಯಾನ್ಸರ್​​ನಿಂದ ಬಳಲುತ್ತಿದ್ದ 82ವಯಸ್ಸಿನ ಪೀಲೆ ನಿಧನಕ್ಕೆ ಭಾರತ ಸೇರಿ ಇಡೀ ವಿಶ್ವದಲ್ಲಿರುವ ಅವರ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಪೋಸ್ಟ್​ ಹಾಕಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ನೆಚ್ಚಿನ ಆಟಗಾರನ ಸಾಧನೆಗಳನ್ನು ಸ್ಮರಿಸುತ್ತಿದೆ.

ರಿಷಭ್​ ಪಂತ್​ಗೆ ಅಪಘಾತ
ಇದೊಂದು ಸುದ್ದಿ ಭರಸಿಡಿಲಿನಂತೆ ಬಂದಿತ್ತು. ಮಾಧ್ಯಮಗಳು, ಸೋಷಿಯಲ್​ ಮೀಡಿಯಾಗಳೆಲ್ಲ ಪ್ರಧಾನಿ ನರೇಂದ್ರ ಮೋದಿ ತಾಯಿ ಸುದ್ದಿಯನ್ನು ಭಿತ್ತರಿಸುತ್ತಿದ್ದವು. ಹಾಗೇ, ಫುಟ್ಬಾಲ್​ ಆಟಗಾರ ಪೀಲೆ ನಿಧನದ ಚರ್ಚೆಯೂ ಆಗುತ್ತಿತ್ತು. ಅಷ್ಟೊತ್ತಿಗೆ ಬಂದಿತ್ತು ‘ಕ್ರಿಕೆಟರ್​ ರಿಷಭ್​ ಪಂತ್​’ ಗೆ ಅಪಘಾತವಾದ ಸುದ್ದಿ. ನೆಟ್ಟಿಗರಂತೂ ಲಗುಬಗೆಯಿಂದ ರಿಷಭ್​ ಪಂತ್​ ಆ್ಯಕ್ಸಿಡೆಂಟ್​ ಎಂದು ಗೂಗಲ್​ ಸರ್ಚ್​ ಮಾಡಲು ತೊಡಗಿದ್ದರು. ಅದರಲ್ಲೂ ರಿಷಭ್​ ಪಂತ್​ ಅವರ ಕಾರು ಸುಟ್ಟು ಭಸ್ಮವಾದ ಫೋಟೋ ನೋಡಿದ ಮೇಲೆ ಅಕ್ಷರಶಃ ಭಯವಾಗಿತ್ತು. ಖ್ಯಾತ ಕ್ರಿಕೆಟರ್​, ಭವಿಷ್ಯದಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್​ ಆಗಬಲ್ಲ ಸಾಮರ್ಥ್ಯ ಇರುವ ರಿಷಬ್​ ಪಂತ್​​ಗೆ ಅಪಘಾತವಾದ ಸುದ್ದಿ ಕ್ರೀಡಾಪ್ರೇಮಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಸದ್ಯ ರಿಷಭ್​ ಪಂತ್​ ಆರೋಗ್ಯ ಸ್ಥಿರವಾಗಿದ್ದು, ಅವರ ಚೇತರಿಕೆಗಾಗಿ ಅನೇಕ ಕ್ರಿಕೆಟರ್ಸ್​ ಮತ್ತು ಇತರ ಕ್ಷೇತ್ರಗಳ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.

ಇವತ್ತಿಡೀದಿನ ಇಂಟರ್​​ನೆಟ್​​ನಲ್ಲಿ ಈ ಮೂರು ವಿಷಯಗಳ ಬಗ್ಗೆಯೇ ಸರ್ಚ್​ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಂತ್ವನ ಹೇಳಲಾಗುತ್ತಿದೆ. ಪೀಲೆಯಂಥ ಅದ್ಭುತ ಆಟಗಾರ ಇನ್ನೊಬ್ಬರಿಲ್ಲ ಎಂಬ ಹೊಗಳಿಕೆಯ ಪೋಸ್ಟ್​ಗಳು ಕಾಣಿಸುತ್ತಿವೆ. ಹಾಗೇ, ರಿಷಭ್​ ಪಂತ್​ ಚೇತರಿಕೆಗಾಗಿ ಹಾರೈಕೆಗಳ ಸುರಿಮಳೆಯಾಗುತ್ತಿದೆ. Get well soon champ ಎಂಬ ಹ್ಯಾಷ್​ಟ್ಯಾಗ್​ ಕೂಡ ಟ್ರೆಂಡ್ ಆಗುತ್ತಿದೆ. ಒಟ್ಟಿನಲ್ಲಿ ಇವತ್ತು ಇಂಟರ್​ನೆಟ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅವರ ತಾಯಿ ಹೀರಾಬೆನ್​, ಪೀಲೆ ಮತ್ತು ರಿಷಭ್​ ಪಂತ್​ ಹೆಚ್ಚು ಚರ್ಚೆಯಲ್ಲಿದ್ದಾರೆ.

ಇದನ್ನೂ ಓದಿ: Heeraben Modi | ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಬಾಲಿವುಡ್ ಸೆಲೆಬ್ರಿಟಿಗಳ ಸಂತಾಪ

Exit mobile version