Site icon Vistara News

ಪಶ್ಚಿಮ ಬಂಗಾಳ ಸರ್ಕಾರ ಸಂಕಷ್ಟದಲ್ಲಿ?; 38 ಶಾಸಕರ ಬಗ್ಗೆ ಬ್ರೇಕಿಂಗ್ ಸುದ್ದಿ ಕೊಟ್ಟ ಮಿಥುನ್ ಚಕ್ರವರ್ತಿ

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜಕೀಯಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ, ಹಿರಿಯ ಚಲನಚಿತ್ರ ಕಲಾವಿದ ಮಿಥುನ್ ಚಕ್ರವರ್ತಿ ಒಂದು ಬ್ರೇಕಿಂಗ್​ ನ್ಯೂಸ್ ಕೊಟ್ಟಿದ್ದಾರೆ. ಇದು ಸತ್ಯವೇ ಆದರೆ ದೀದಿ ಸರ್ಕಾರದ ಸ್ಥಿರತೆಯನ್ನು ಏರುಪೇರು ಮಾಡುವುದರಲ್ಲಿ ಎರಡು ಮಾತಿಲ್ಲ. ಇಂದು ಮಾಧ್ಯಮದ ಎದುರು ಬಂದ ಮಿಥುನ್​ ಚಕ್ರವರ್ತಿ ಮೊದಲು ಹೇಳಿದ್ದೇ ‘ನೀವು ಒಂದು ಬ್ರೇಕಿಂಗ್ ನ್ಯೂಸ್ ಕೇಳಲು ಇಷ್ಟಪಡುತ್ತೀರಾ?’ ಎಂಬ ಮಾತನ್ನು. ಅಷ್ಟಕ್ಕೂ ಮಿಥುನ್ ಚಕ್ರವರ್ತಿ ಹೇಳಿದ್ದು ‘ತೃಣಮೂಲ ಕಾಂಗ್ರೆಸ್​ನ ಒಟ್ಟು 38 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅದರಲ್ಲೂ 21 ಶಾಸಕರು ನೇರವಾಗಿಯೇ ಸಂಪರ್ಕದಲ್ಲಿದ್ದಾರೆ’ ಎಂಬ ಮಹತ್ವದ ವಿಚಾರವನ್ನು..!

ಸರ್ಕಾರಕ್ಕೆ ಸಂಕಷ್ಟ?
38 ಟಿಎಂಸಿ ಶಾಸಕರು ನಮ್ಮೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ ಮತ್ತು ಅದರಲ್ಲೂ 21 ಶಾಸಕರು ನಮ್ಮೊಂದಿಗೆ ನೇರವಾಗಿ ಸಂಪರ್ಕದಲ್ಲಿ ಇದ್ದಾರೆ ಎಂದು ಮಿಥುನ್ ಚಕ್ರವರ್ತಿ ಹೇಳಿದ್ದಾರೆ. ಹಾಗೊಮ್ಮೆ ಈ 38 ಶಾಸಕರು ಬಿಜೆಪಿ ಸೇರಿದರೂ ತೃಣಮೂಲ ಕಾಂಗ್ರೆಸ್ ಸರ್ಕಾರ ಪತನವಾಗಲು ಸಾಧ್ಯವಿಲ್ಲ. ಯಾಕೆಂದರೆ ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ 294 ವಿಧಾನಸಭೆ ಕ್ಷೇತ್ರಗಳಿದ್ದು ಅದರಲ್ಲಿ ಟಿಎಂಸಿ 220 ಸೀಟ್​ಗಳನ್ನು ಹೊಂದಿದೆ ಮತ್ತು ಬಿಜೆಪಿ ಕೇವಲ 70 ಶಾಸಕರನ್ನು ಹೊಂದಿದೆ. ಇಲ್ಲಿ ಸರ್ಕಾರ ರಚನೆಗೆ ಬೇಕಿರುವ ಬಹುಮತ 148. ಅಂದರೆ ಯಾವ ಪಕ್ಷದ ಕೈಯಲ್ಲಿ ಕನಿಷ್ಠ 148 ಕ್ಷೇತ್ರಗಳಿರುತ್ತವೆಯೋ ಆ ಪಕ್ಷ ಸರ್ಕಾರ ರಚನೆ ಮಾಡಬಹುದು. ಟಿಎಂಸಿಯ 220 ಶಾಸಕರು ಬಿಜೆಪಿಗೆ ಬಂದಾಕ್ಷಣ ದೀದಿ ಸರ್ಕಾರಕ್ಕೆ ದೊಡ್ಡಮಟ್ಟದ ಹಾನಿಯಾಗುವುದಿಲ್ಲ. ಆದರೆ ಸಂಖ್ಯಾಬಲ ಕುಸಿಯುವ ಮೂಲಕ ಆಂತರಿಕವಾಗಿ ಸ್ವಲ್ಪಮಟ್ಟಿಗಿನ ಏರುಪೇರು ಆಗುವುದು ನಿಶ್ಚಿತ.

ಬಿಜೆಪಿಯೆಂದರೆ ಸಾಕು ಸದಾ ಸಿಡಿಮಿಡಿ ಎನ್ನುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿ, ‘ಬಿಜೆಪಿಗೆ ಮಾಡೋಕೆ ಬೇರೆ ಏನೂ ಕೆಲಸವಿಲ್ಲ. ಮೂರ್ನಾಲ್ಕು ತನಿಖಾ ಏಜೆನ್ಸಿಗಳನ್ನು ಮುಂದೆ ಬಿಟ್ಟು, ಎಲ್ಲ ರಾಜ್ಯಗಳ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಅದಕ್ಕೆ ಒಂದು ಕೆಲಸ. ಪಶ್ಚಿಮ ಬಂಗಾಳ ರಾಜ್ಯಸರ್ಕಾರವನ್ನು ಅವಮಾನಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ನಮ್ಮನ್ನು ಒಡೆಯುವುದು ಸುಲಭದ ಕೆಲಸವಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಜೈಲಲ್ಲಿದ್ದ ಪಶ್ಚಿಮ ಬಂಗಾಳ ಸಚಿವನಿಗೆ ಎದೆನೋವು; ಆಸ್ಪತ್ರೆಗೆ ದಾಖಲಿಸಲು ಕೋರ್ಟ್‌ ಅನುಮತಿ

Exit mobile version