Site icon Vistara News

Bharat Jodo Yatra | 3ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ರೈತರೊಂದಿಗೆ ರಾಹುಲ್​ ಗಾಂಧಿ ಸಂವಾದ

Rahul Gandhi Bharat Jodo Yatra 1

ನವ ದೆಹಲಿ: ಕಾಂಗ್ರೆಸ್​​ ಪಕ್ಷ ಹಮ್ಮಿಕೊಂಡಿರುವ ಭಾರತ್​ ಜೋಡೋ ಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಸೆಪ್ಟೆಂಬರ್ 7ರ ಸಂಜೆ ಕನ್ಯಾಕುಮಾರಿಯ ಗಾಂಧಿ ಮಂಟಪದಲ್ಲಿ ಈ ಯಾತ್ರೆಗೆ ಚಾಲನೆ ಸಿಕ್ಕಿದೆ. ಸೆಪ್ಟೆಂಬರ್​ 8ರಂದು ಮುಂಜಾನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಲವು ಪ್ರಮುಖ ನಾಯಕರು ಕಾಲ್ನಡಿಗೆ ಪ್ರಾರಂಭ ಮಾಡಿದ್ದಾರೆ. ಅವರ ಯಾತ್ರೆ ಇಂದು ತಮಿಳುನಾಡಿನ ನಾಗರಕೋಯಿಲ್​ಗೆ ತಲುಪಿದೆ. ಅಲ್ಲಿನ ಸ್ಕಾಟ್​ ಕ್ರಿಶ್ಚಿಯನ್ ಕಾಲೇಜಿನಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜ ಹಾರಿಸಿದ್ದಾರೆ.

ಇಂದು ಯಾತ್ರೆಯ ಒಂದು ಭಾಗವಾಗಿ ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ರೈತರ ಜತೆ ಸಂವಾದ ನಡೆಸಿದ್ದಾರೆ. ಮಧ್ಯಾಹ್ನ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ. ನಿನ್ನೆ ಮುಂಜಾನೆ ಯಾತ್ರೆ ಹೊರಟ ಕಾಂಗ್ರೆಸ್ಸಿಗರು ಮೊದಲು ನಿಂತಿದ್ದು ತಮಿಳುನಾಡಿನ ಸುಚೀಂದ್ರಮ್​​ನಲ್ಲಿರುವ 101 ವರ್ಷಗಳಷ್ಟು ಹಳೆಯ ಶಾಲೆಯಲ್ಲಿ. ಸುಮಾರು 13 ಕಿಮೀ ನಡೆದ ಬಳಿಕ ಅವರು ಆ ಶಾಲೆಯಲ್ಲಿ ಯಾತ್ರೆಯನ್ನು ಒಮ್ಮೆ ನಿಲ್ಲಿಸಿದ್ದರು. ಆಗ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, 2017ರಲ್ಲಿ ನೀಟ್​ ಪರೀಕ್ಷೆ ಉತ್ತೀರ್ಣರಾಗಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ ಅನಿತಾ ಎಂಬ ವಿದ್ಯಾರ್ಥಿನಿಯ ಕುಟುಂಬವನ್ನೂ ಅವರು ಭೇಟಿ ಮಾಡಿದರು. ಇದೇ ವೇಳ ನೀಟ್​ ತೆಗೆದು ಹಾಕಬೇಕು ಎಂಬ ಒತ್ತಾಯವನ್ನು ಅನಿತಾ ಮನೆಯವರು ಮಾಡಿದ್ದಾರೆ.

150 ದಿನಗಳ ಕಾಲ ನಡೆಯಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸೇರಿ ಸುಮಾರು 230 ಮಂದಿ ಪಾದಯಾತ್ರೆ ನಡೆಸುವರು. ಇವರೆಲ್ಲ ರಾತ್ರಿ ಕಂಟೇನರ್​​ಗಳಲ್ಲಿ ತಂಗಲಿದ್ದಾರೆ. ಕಂಟೇನರ್​​ಗಳನ್ನು ಹೊತ್ತ ಟ್ರಕ್​ಗಳು ಈ ಯಾತ್ರಿಗಳು ಹೋದಲ್ಲೆಲ್ಲ ಚಲಿಸಲಿದೆ. ಭಾರತ್​ ಜೋಡೋ ಯಾತ್ರೆ ಒಟ್ಟು 12 ರಾಜ್ಯಗಳನ್ನು ಸುತ್ತಲಿದ್ದು ಸೆಪ್ಟೆಂಬರ್​ ಕೊನೇ ವಾರದಲ್ಲಿ ಕರ್ನಾಟಕಕ್ಕೂ ಬರಲಿದೆ.

ಇದನ್ನೂ ಓದಿ: Bharat Jodo Yatra | ಕಾಂಗ್ರೆಸ್​ ಪುನರುಜ್ಜೀವನಕ್ಕೆ ಭಾರತ್​ ಜೋಡೋ ಯಾತ್ರೆ ಅತ್ಯವಶ್ಯ: ಸೋನಿಯಾ ಗಾಂಧಿ

Exit mobile version