ಗುವಾಹಟಿ: ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ (Amritpal Singh)ಬಂಧನವಾಗಿಲ್ಲ. ಆತ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿರುವ ಪೊಲೀಸರು ಅವನಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಅದರ ಮಧ್ಯೆ ನಿನ್ನೆ ಜಲಂಧರ್ನ ನಾಕೋಡರ್ನಲ್ಲಿ ಬಂಧಿತರಾಗಿರುವ ಅಮೃತ್ಪಾಲ್ ಸಿಂಗ್ನ ಆರು ಸಹಚರರಲ್ಲಿ ನಾಲ್ವರನ್ನು ವಿಶೇಷ ವಿಮಾನದಲ್ಲಿ ಅಸ್ಸಾಂಗೆ ಕಳಿಸಲಾಗಿದ್ದು, ಅವರನ್ನು ಅಲ್ಲಿನ ದಿಬ್ರುಗಢ್ನ ಕೇಂದ್ರೀಯ ಕಾರಾಗೃಹದಲ್ಲಿ ಇಡಲಾಗುತ್ತದೆ ಎಂದು ಹೇಳಲಾಗಿದೆ.
ಈ ನಾಲ್ವರು ಖಲಿಸ್ತಾನಿ ಹೋರಾಟಗಾರರ ಜತೆ ಪಂಜಾಬ್ ಪೊಲೀಸ್ ಇಲಾಖೆಯ ಕಾರಾಗೃಹ ಐಜಿ ಸೇರಿ 27 ಸಿಬ್ಬಂದಿ ತಂಡ ಅಸ್ಸಾಂಗೆ ಹೋಗಿದೆ. ಅಲ್ಲಿನ ಮೋಹನ್ಬಾರಿ ಏರ್ಪೋರ್ಟ್ನಲ್ಲಿ ದಿಬ್ರುಗಢ್ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಎಸ್ಪಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಇದ್ದರು. ಹಾಗೇ, ಏರ್ಪೋರ್ಟ್ನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಅಂದಹಾಗೇ. ಈ ದಿಬ್ರುಗಢ್ ಕೇಂದ್ರೀಯ ಕಾರಾಗೃಹ ಉತ್ತರ ಭಾರತದಲ್ಲಿಯೇ ಅತ್ಯಂತ ಹಳೇ ಜೈಲು. ಅಸ್ಸಾಂನಲ್ಲಿ ಯುಎಲ್ಎಫ್ಎ ಭಯೋತ್ಪಾದಕತೆ ಜಾಸ್ತಿ ಇದ್ದ ಸಮಯದಲ್ಲಿ, ಪ್ರಮುಖ ಉಗ್ರ ನಾಯಕರನ್ನೆಲ್ಲ ಇದೇ ಕಾರಾಗೃಹದಲ್ಲಿ ಇಡಲಾಗುತ್ತಿತ್ತು.
ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿದ್ದುಕೊಂಡು ಭಾರತದಲ್ಲಿ ಸಿಖ್ ಧರ್ಮದ ಯುವಕರನ್ನು ಖಲಿಸ್ತಾನಿ ಚಳುವಳಿಗೆ ಸೆಳೆಯುತ್ತ, ಹಿಂಸಾಚಾರ ಹುಟ್ಟುಹಾಕುತ್ತಿದ್ದ ಅಮೃತ್ಪಾಲ್ ಸಿಂಗ್ ಈಗ ಇನ್ನಿತರ ಕೆಲವು ಉಗ್ರರೊಂದಿಗೆ ಸೇರಿಕೊಂಡು ದೆಹಲಿಯಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ. ಈ ವಿಚಾರ ಗುಪ್ತಚರ ಇಲಾಖೆಗೆ ಗೊತ್ತಾಗುತ್ತಿದ್ದಂತೆ, ಪೊಲೀಸ್ ಕಾರ್ಯಾಚರಣೆ ಚುರುಕುಗೊಂಡಿದೆ. ಮಾ.18ರಂದು ಅಮೃತ್ಪಾಲ್ ಬಂಧನದ ಸುದ್ದಿ ಬಂತಾದರೂ, ಬಳಿಕ ಪೊಲೀಸರು ಪ್ರಕಟಣೆ ಹೊರಡಿಸಿ ಆತ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ. ಅಮೃತ್ಪಾಲ್ಗಾಗಿ ಶೋಧ ಮುಂದುವರಿದಿದೆ.
ಅಮೃತ್ಪಾಲ್ ಸಿಂಗ್ ಮಾ.18ರಂದು ಪೊಲೀಸರಿಂದ ತಪ್ಪಿಸಿಕೊಂಡು, ಬೈಕ್ ಒಂದರಲ್ಲಿ ಅತ್ಯಂತ ವೇಗವಾಗಿ ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ವರದಿಯಾಗಿದೆ. ಇನ್ನು ಆತನ ‘ವಾರಿಸ್ ಪಂಜಾಬ್ ದೆ‘ ಸಂಘಟನೆಯ ಸುಮಾರು 78 ಮಂದಿಯನ್ನು ಬಂಧಿಸಿರುವ ಪೊಲೀಸರು, ನಿನ್ನೆ ಅವನ 6 ಗನ್ಮೆನ್ಗಳನ್ನು, ಸಹಚರರನ್ನು ಬಂಧಿಸಿದ್ದಾರೆ. ಸದ್ಯ ಪಂಜಾಬ್ನಲ್ಲಿ ಇದೇ ವಿಚಾರಕ್ಕೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇಂಟರ್ನೆಟ್, ಎಸ್ಎಂಎಸ್ ಸೇವೆ ಬಂದ್ ಆಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸೆಕ್ಷನ್ 144 ಹೇರಲಾಗಿದೆ. ಅಮೃತ್ಪಾಲ್ ಸಿಂಗ್ಗೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳು ಹರಡುವುದನ್ನು ತಪ್ಪಿಸಲು ಈ ಮೆಸೇಜಿಂಗ್, ಇಂಟರ್ನೆಟ್ ಸೇವೆಗಳನ್ನೆಲ್ಲ ಬಂದ್ ಮಾಡಲಾಗಿದ್ದು, ಇದು ಸೋಮವಾರ ಸಂಜೆಯವರೆಗೂ ಮುಂದುವರಿಯಲಿದೆ ಎನ್ನಲಾಗಿದೆ.