Site icon Vistara News

ಹಣದ ಗೋದಾಮು ಆಗಿರುವ ಅರ್ಪಿತಾ ಮನೆಯಲ್ಲಿದ್ದ 4 ಐಷಾರಾಮಿ ಕಾರುಗಳು ನಾಪತ್ತೆ !

Arpita Mukherjee Car

ಕೋಲ್ಕತ್ತ: ಪಶ್ಚಿಮ ಬಂಗಾಳ (West Bengal)ದ ಪ್ರಾಥಮಿಕ ಶಾಲಾ ನೇಮಕಾತಿ ಅಕ್ರಮದಲ್ಲಿ ಬಂಧಿತಳಾಗಿರುವ ಅರ್ಪಿತಾ ಮುಖರ್ಜಿ (Arpita Mukherjee)ಯ ಕೋಲ್ಕತ್ತದ ಡೈಮಂಡ್‌ ಸಿಟಿ ಸಂಕೀರ್ಣದಲ್ಲಿರುವ ಮನೆಯಲ್ಲಿ ಇದ್ದ ನಾಲ್ಕು ಐಷಾರಾಮಿ ಕಾರುಗಳು ನಾಪತ್ತೆಯಾಗಿವೆ. ಈ ಕಾರುಗಳು ಫ್ಲ್ಯಾಟ್‌ನ ಎದುರು ನಿಂತಿದ್ದವು. ಆದರೆ ಅರ್ಪಿತಾ ಬಂಧನವಾದ ದಿನದಿಂದಲೂ ಕಾರುಗಳು ಕಾಣಿಸುತ್ತಿಲ್ಲ ಎಂದು ಹೇಳಲಾಗಿದ್ದು, ವಾಹನಗಳ ಪತ್ತೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅರ್ಪಿತಾ ಮುಖರ್ಜಿ ಮನೆಗಳೀಗ ಹಣದ ಗೋದಾಮುಗಳಾಗಿವೆ. ಅಲ್ಲಿ ಹುಡುಕಿದಷ್ಟೂ ಕಾಸು ಸಿಗುತ್ತಿದೆ. ಜುಲೈ 22ರಿಂದ ಇಲ್ಲಿಯವರೆಗೆ 50 ಕೋಟಿ ರೂಪಾಯಿಗೂ ಅಧಿಕ ನಗದು ಅವರ ಮನೆಯಲ್ಲಿ ಪತ್ತೆಯಾಗಿದೆ. ಮೊದಲು ಕೋಲ್ಕತ್ತದ ಮನೆಯಲ್ಲಿ 21.90 ಕೋಟಿ ರೂಪಾಯಿ, 56 ಲಕ್ಷ ವಿದೇಶಿ ಕರೆನ್ಸಿ ಮತ್ತು 76 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿತ್ತು. ಹಾಗೇ, ಜುಲೈ 27ರಂದು ನಡೆದ ರೇಡ್‌ ವೇಳೆ 28.90 ಕೋಟಿ ರೂಪಾಯಿ ನಗದು, 5 ಕೆಜಿ ಚಿನ್ನಾಭರಣಗಳು ಮತ್ತು ಹಲವು ದಾಖಲೆಗಳನ್ನು ಜಪ್ತಿ ಮಾಡಿದೆ.

ಅರ್ಪಿತಾ ಮುಖರ್ಜಿ ಎಲ್ಲ ತಪ್ಪುಗಳನ್ನೂ ಪಾರ್ಥ ಚಟರ್ಜಿ ಮೇಲೆ ಹೊರಿಸಿದ್ದಾರೆ. ನನ್ನ ಮನೆಯಲ್ಲಿ ಹಣ ಇದೆ ಎಂದಷ್ಟೇ ಗೊತ್ತಿತ್ತು. ಯಾವ ಕೋಣೆಯಲ್ಲಿ ಎಷ್ಟು ದುಡ್ಡಿದೆ ಗೊತ್ತಿರಲಿಲ್ಲ. ಹಣ ಕೂಡಿಟ್ಟಿದ್ದ ಕೋಣೆಗಳಿಗೆ ನನಗೂ ಪ್ರವೇಶ ಇರಲಿಲ್ಲ. ಎಲ್ಲವನ್ನೂ ಪಾರ್ಥ ಚಟರ್ಜಿ ಮತ್ತು ಅವರ ಕಡೆಯವರೇ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾಳೆ. ಇತ್ತ ಪಾರ್ಥ ಚಟರ್ಜಿ ಆಸ್ಪತ್ರೆ ಸೇರಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ಸದ್ಯ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ಮತ್ತು ಪಕ್ಷದ ಎಲ್ಲ ಸಾಂಸ್ಥಿಕ ಹುದ್ದೆಗಳಿಂದ ವಜಾಗೊಳಿಸಿ, ಪಕ್ಷದಿಂದಲೇ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಹಣವಿದ್ದ ಕೋಣೆಗಳಿಗೆ ನನಗೆ ಪ್ರವೇಶ ಇರಲಿಲ್ಲ; ಇ ಡಿ ಎದುರು ಬಾಯ್ಬಿಟ್ಟ ಅರ್ಪಿತಾ ಮುಖರ್ಜಿ

Exit mobile version