ಚೆನ್ನೈ: ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ನಲುಗಿದೆ. ಚಂಡಮಾರುತ ಪ್ರಭಾವದಿಂದ ಭಾರಿ ಮಳೆಯಾಗುತ್ತಿದೆ. ಮಾಂಡೌಸ್ ಸಂಬಂಧಿತ ಅವಘಡದಿಂದ ಇದುವರೆಗೆ 4 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿ ಎದ್ದಿರುವ ಮಾಂಡೌಸ್ ತಮಿಳುನಾಡಿನ ಕರಾವಳಿ ತೀರವನ್ನು ಗಂಟೆಗೆ 75 ಕಿಮೀ ವೇಗದಲ್ಲಿ ದಾಟಿತ್ತು. ಇದರಿಂದ ಭಾರಿ ಮಳೆಯುಂಟಾಗಿ ಶುಕ್ರವಾರ ರಾತ್ರಿ ಮಹಾಬಲಿಪುರಂ ಬಳಿ ಭೂಕುಸಿತ ಉಂಟಾಗಿದೆ. ಸದ್ಯ ಒಟ್ಟು 12 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಚೆನ್ನೈನಲ್ಲಿ ಇದುವರೆಗೆ 115 ಎಂಎಂಗೂ ಅಧಿಕ ಮಳೆಯಾಗಿದೆ. ಇಲ್ಲಿ 400ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿವೆ. ಚೆನ್ನೈನ ಕಾಸಿಮೇಡು ಪ್ರದೇಶಕ್ಕೆ ಭೇಟಿಕೊಟ್ಟಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಹಾಗೇ, ಇನ್ನುಳಿದ ಭಾಗಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ, ಜನ-ಪಶುಗಳ ರಕ್ಷಣೆಗೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಕಾಸಿಮೇಡುವಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಂ.ಕೆ.ಸ್ಟಾಲಿನ್ ‘ಮಾಂಡೌಸ್ ಎದುರಿಸಲು ನಾವು ಎಲ್ಲರೀತಿಯ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿದ್ದೆವು. ಹಾಗಾಗಿ ದೊಡ್ಡಮಟ್ಟದ ಹಾನಿಯಾಗದಂತೆ ತಡೆದಿದ್ದೇವೆ’ ಎಂದು ತಿಳಿಸಿದ್ದಾರೆ.
ಮಹಾಬಲಿಪುರಂ(ಮಾಮಲ್ಲಾಪುರಂ)ಗೆ ಹೊಂದಿಕೊಂಡಿರುವ ಕೋವಾಲಮ್ನಲ್ಲಿ ಸಮುದ್ರತೀರದಲ್ಲಿದ್ದ ಹಲವು ಬೋಟ್ಗಳು ಧ್ವಂಸಗೊಂಡಿವೆ. ಅಲ್ಲೇ ಸಮೀಪದಲ್ಲಿದ್ದ ಅಂಗಡಿಗಳ ತಗಡಿನ ಛಾವಣಿಗಳೆಲ್ಲ ಹಾರಿಹೋಗಿವೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಮೀನುಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನುಳಿದಂತೆ ತಮಿಳುನಾಡಿನ ಕರಾವಳಿ ಸೇರಿ, ರಾಜ್ಯಾದ್ಯಂತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ಸಿಬ್ಬಂದಿ ಕರ್ತವ್ಯನಿರತರಾಗಿದ್ದಾರೆ. ಕರಾವಳಿ ತೀರಗಳ ಜನರನ್ನೆಲ್ಲ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಆಂಧ್ರಪ್ರದೇಶ, ಪುದುಚೇರಿ ಭಾಗಗಳಲ್ಲೂ ಮಳೆ ಬೀಳುತ್ತಿದೆ.
ಇದನ್ನೂ ಓದಿ: Cyclone Mandous| ತಮಿಳುನಾಡಿನಲ್ಲಿ ಮಾಂಡೌಸ್ ಅಬ್ಬರ; ಭೂಕುಸಿತ, ಬುಡಸಮೇತ ಉರುಳಿಬಿದ್ದ 200ಕ್ಕೂ ಹೆಚ್ಚು ಮರಗಳು