ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ (Bhim Army chief Chandra Shekhar Aazad) ಅವರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ, ಚಂದ್ರಶೇಖರ್ ಆಜಾದ್ (Chandra Shekhar Aazad) ಅವರು ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಈ ಗನ್ಮೆನ್ಗಳೂ ಕೂಡ ಕಾರಿನಲ್ಲಿಯೇ ಬಂದಿದ್ದರು. ಚಂದ್ರಶೇಖರ್ ಆಜಾದ್ ಅವರ ಕಾರಿನ ಕಿಟಕಿ ಗಾಜನ್ನು ತೂರಿಕೊಂಡು ಬಂದ ಒಂದು ಗುಂಡು, ಅವರ ಸೊಂಟದ ಭಾಗಕ್ಕೆ ತಗುಲಿ ಗಾಯವಾಗಿದೆ. ಇದೀಗ ಸಹರಾನ್ಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನು ಗನ್ಮೆನ್ಗಳು ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಶೇಖರ್ ಆಜಾದ್ ಅವರು ಸದ್ಯ ಸಹರಾನ್ಪುರದ ಎಸ್ಬಿಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಂದ್ರಶೇಖರ್ ಆಜಾದ್ ಅವರು ತಮ್ಮ ಟೊಯೊಟಾ ಫಾರ್ಚುನರ್ ಕಾರಿನಲ್ಲಿ ದೆಹಲಿಗೆ ತೆರಳುತ್ತಿದ್ದರು. ಅವರೊಂದಿಗೆ ಸಹೋದರ ಸೇರಿ ಒಟ್ಟು ನಾಲ್ವರು ಇದ್ದರು. ಗನ್ಮೆನ್ಗಳು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ಅವರ ಕಾರಿನ ಮೇಲೆ ಹರ್ಯಾಣದ ಲೈಸೆನ್ಸ್ ನಂಬರ್ ಪ್ಲೇಟ್ ಇತ್ತು. ಚಂದ್ರಶೇಖರ್ ಆಜಾದ್ ಕಾರಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಮೂರು ಗುಂಡು ಕಾರಿಗೆ ಬಿದ್ದಿದೆ. ಕಾರಿನ ಹಿಂಬದಿಯ ಗಾಜು ಕೂಡ ಪುಡಿಪುಡಿಯಾಗಿದೆ. ಪೊಲೀಸ್ ಹೇಳಿಕೆ ಕೊಟ್ಟಿದ್ದ ಚಂದ್ರಶೇಖರ್ ಆಜಾದ್ ‘ನನಗೆ ಗುಂಡು ಹಾರಿಸಿದವರ ಮುಖ ಕಾಣಿಸಲಿಲ್ಲ. ನನ್ನ ಜತೆಗೆ ಇದ್ದವರು ಅವರನ್ನು ಗುರುತಿಸಬಹುದು’ ಎಂದು ಹೇಳಿದ್ದರು.
ಇದನ್ನೂ ಓದಿ: Chandrashekhar Azad: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ಗೆ ಗುಂಡೇಟು; ಆಸ್ಪತ್ರೆಗೆ ದಾಖಲು
ಭೀಮ್ ಆರ್ಮಿ ಎಂಬುದು ಅಂಬೇಡ್ಕರ್ ಅನುಯಾಯಿಗಳ ಒಂದು ಸಂಘಟನೆ. ದಲಿತರ ಹಕ್ಕು ರಕ್ಷಣೆಗಾಗಿ 2015ರಲ್ಲಿ ಸ್ಥಾಪಿತಗೊಂಡಿದೆ. ಚಂದ್ರಶೇಖರ್ ಆಜಾದ್ ರಾವಣ್ ಮತ್ತು ವಿನಯ್ ರತನ್ ಸಿಂಗ್ ಇದರ ಸಂಸ್ಥಾಪಕರು. ಈ ಸಂಘಟನೆ ಸ್ಥಾಪಿತಗೊಂಡಿದ್ದು ಉತ್ತರ ಪ್ರದೇಶದಲ್ಲಿ. ಆದರೆ ಇಡೀ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ದಲಿತರ ಮೇಲಾಗುವ ದೌರ್ಜನ್ಯ, ಮೇಲ್ಜಾತಿಯವರು ತೋರಿಸುವ ತಾರತಮ್ಯದ ವಿರುದ್ಧ ಇವರು ನಿರಂತರವಾಗಿ ಹೋರಾಡಿಕೊಂಡು ಬಂದಿದ್ದಾರೆ.