Site icon Vistara News

Road Accident: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಬಸ್​ ನಜ್ಜುಗುಜ್ಜು, ನಾಲ್ವರ ದುರ್ಮರಣ

4 killed in Accident in Pune Bangalore highway

#image_title

ಪುಣೆ: ಖಾಸಗಿ ಬಸ್​​ಗೆ ಸರಕು ಸಾಗಣೆ ಟ್ರಕ್​ ಹಿಂದಿನಿಂದ ಡಿಕ್ಕಿಯಾಗಿ (Road Accident) ನಾಲ್ವರು ಮೃತಪಟ್ಟು, 22 ಮಂದಿ ಗಾಯಗೊಂಡ ಘಟನೆ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಪುಣೆಯ ಅಂಬೆಗಾಂವ್​ ಏರಿಯಾದ ನರ್ಹೆ ಎಂಬ ಹಳ್ಳಿಯ ಬಳಿ ಇರುವ ಸೇತುವೆಯೊಂದರ ಮೇಲೆ ಮುಂಜಾನೆ 3ಗಂಟೆ ಹೊತ್ತಿಗೆ ಭೀಕರ ಅಪಘಾತ ಆಗಿದೆ. ಈ ಸ್ಥಳ ಸ್ವಾಮಿ ನಾರಾಯಣ ದೇವಸ್ಥಾನದ ಸಮೀಪವೇ ಇದೆ.

ಈ ಖಾಸಗಿ ಬಸ್​​ ಸತಾರಾದಿಂದ ಥಾಣೆಯ ದೊಂಬಿವ್ಲಿಗೆ ಸಂಚಾರ ಮಾಡುತ್ತಿತ್ತು. ಸುಮಾರು 31 ಟನ್​​ಗಳಷ್ಟು ಸಕ್ಕರೆ ಚೀಲ ಹೊತ್ತು ಬಂದ ಟ್ರಕ್​, ಸೂರ್ಯನಾರಾಯಣ ದೇವಸ್ಥಾನ ಸಮೀಪ ಇರುವ ಸೇತುವೆಯ ಮೇಲೆ ಬಸ್​​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿಯೂ ಪಲ್ಟಿಯಾಗಿದೆ. ಬಸ್​​ನ ಹಿಂಭಾಗವಂತೂ ನುಜ್ಜುಗುಜ್ಜಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನೆಲ್ಲ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್​​ನಲ್ಲಿದ್ದ ಮೂವರು ಪ್ರಯಾಣಿಕರು ಮತ್ತು ಟ್ರಕ್​​ನ ಡ್ರೈವರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಎನ್​ಸಿಪಿ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಪುಣೆ ಜಿಲ್ಲಾ ಪರಿಷತ್ ಸಿಇಒ ಆಯುಷ್ ಪ್ರಸಾದ್ ಅವರು ‘ಟ್ರಕ್​ ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಬಸ್​ಗೆ ಡಿಕ್ಕಿ ಹೊಡೆಯಲು ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ವಾಹನದ ಬ್ರೇಕ್​​ ಸರಿಯಾಗಿದೆಯಾ, ಮತ್ತೇನಾದರೂ ತೊಂದರೆಯಿದೆಯಾ ಎಂಬುದನ್ನು ಚೆಕ್​ ಮಾಡಿಕೊಳ್ಳಬೇಕು. ರಸ್ತೆ ಮೇಲೆ ಏಕಾಗ್ರತೆ ಇರಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Road accident: ಕಾರುಗಳ ಮುಖಾಮುಖಿ ಡಿಕ್ಕಿ; ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಮೃತ್ಯು, ಇಬ್ಬರು ಗಂಭೀರ

Exit mobile version