ಶ್ರೀನಗರ: ಇಂದು ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಸಿಬ್ಬಂದಿ ಭರ್ಜರಿ ಬೇಟೆಯಾಡಿದ್ದಾರೆ. ಜಮ್ಮು ಹೊರವಲಯದಲ್ಲಿ ಸಾಗುತ್ತಿದ್ದ ಟ್ರಕ್ನಲ್ಲಿ ಅಡಗಿದ್ದ ನಾಲ್ವರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ ಟ್ರಕ್ ಮೇಲೆ ಒಂದೇ ಸಮ ಗುಂಡಿನ ದಾಳಿ ನಡೆಸಿದ್ದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ಆರಿಸಿದ್ದಾರೆ.
ಇಂದು ಮುಂಜಾನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾವಿ ಸೇತುವೆ ಬಳಿ ಈ ಎನ್ಕೌಂಟರ್ ನಡೆದಿದೆ. ಉಗ್ರರು ಟ್ರಕ್ನಲ್ಲಿ ಕಾಶ್ಮೀರದ ಕಡೆಗೆ ಹೋಗುತ್ತಿದ್ದರು. ಅದ್ಯಾಕೋ ಟ್ರಕ್ ಅನುಮಾನಾಸ್ಪದವಾಗಿ ಚಲಿಸುತ್ತಿದೆ ಎಂಬುದನ್ನು ಗಮನಿಸಿದ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಅದರ ಬೆನ್ನತ್ತಿದ್ದವು. ಸಿದ್ರಾ ಚೆಕ್ಪಾಯಿಂಟ್ನಲ್ಲಿರುವ ಪೊಲೀಸ್ ಸಿಬ್ಬಂದಿಗೆ ಮೊದಲೇ ಮಾಹಿತಿ ಕೊಟ್ಟಿದ್ದರಿಂದ ಅವರು ಅಲ್ಲಿ ಟ್ರಕ್ ತಡೆದಿದ್ದಾರೆ. ಹೀಗೆ ವಾಹನವನ್ನು ತಡೆದು, ಪರಿಶೀಲನೆ ಶುರು ಮಾಡುತ್ತಿದ್ದಂತೆ ಅದರೊಳಗೆ ಅಡಗಿದ್ದ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಫೈರಿಂಗ್ ಮಾಡಲು ಶುರು ಮಾಡಿದರು. ಈ ವೇಳೆ ಸ್ಥಳದಲ್ಲಿ ಗ್ರೆನೇಡ್ ಕೂಡ ಸ್ಫೋಟಗೊಂಡಿದೆ. ಅಂತಿಮವಾಗಿ ಟ್ರಕ್ನಲ್ಲಿದ್ದ ನಾಲ್ವರು ಭಯೋತ್ಪಾದಕರೂ ಹತ್ಯೆಗೀಡಾಗಿದ್ದಾಗಿ ಜಮ್ಮು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾಪಡೆಗಳ ಮಧ್ಯೆ ಸುಮಾರು 45 ನಿಮಿಷಗಳ ಕಾಲ ಗುಂಡಿನ ಕಾಳಗ ನಡೆದಿದೆ. ಸ್ಥಳೀಯರು ಕೆಲವು ವಿಡಿಯೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು, ಅದರಲ್ಲಿ ಗ್ರೆನೇಡ್ ಸ್ಫೋಟ ಮತ್ತು ಫೈರಿಂಗ್ನ ದೊಡ್ಡ ಶಬ್ದ ಕೇಳುತ್ತದೆ. ಹಾಗೇ, ಹೊಗೆ ಏಳುವುದೂ ಕಾಣುತ್ತದೆ. ಟ್ರಕ್ನಲ್ಲಿ ಅದೇನೋ ಹೊಟ್ಟಿನಂತ ವಸ್ತುವನ್ನು ತುಂಬಲಾಗಿತ್ತು. ಅದೆಲ್ಲವೂ ಸುಟ್ಟುಭಸ್ಮವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಾಗೇ, ಈ ಉಗ್ರರು ಯಾವ ಸಂಘಟನೆಗೆ ಸೇರಿದವರು, ಅವರು ಈ ಪ್ರದೇಶಕ್ಕೆ ಪ್ರವೇಶಿಸಿದ್ದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ. ಹಾಗೇ, ನಾಪತ್ತೆಯಾಗಿರುವ ಟ್ರಕ್ ಚಾಲಕನ ಪತ್ತೆ ಕಾರ್ಯವೂ ಪ್ರಾರಂಭವಾಗಿದೆ. ಈ ಉಗ್ರರು ದೊಡ್ಡಮಟ್ಟದ ದಾಳಿಗೆ ಸಂಚು ರೂಪಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಟ್ರಕ್ನಲ್ಲಿ ಅಡಗಿ ಹೊರಟಿದ್ದ ಉಗ್ರರ ಮೇಲೆ ಭದ್ರತಾ ಪಡೆಯಿಂದ ಫೈರಿಂಗ್; 3 ಭಯೋತ್ಪಾದಕರ ಸಾವು