Site icon Vistara News

ಕೇರಳದಲ್ಲಿ ನರ್ಸ್​ ಸಾವಿನ ಬೆನ್ನಲ್ಲೇ 40 ಹೋಟೆಲ್​​ಗಳ ಬಾಗಿಲು ಕ್ಲೋಸ್​; 62 ಹೋಟೆಲ್​ಗಳಿಗೆ ದಂಡ

Food Poisoning

ಕೇರಳದ ಕೊಟ್ಟಾಯಂನಲ್ಲಿ 33ವರ್ಷದ ನರ್ಸ್​​ವೊಬ್ಬರು ಮೃತಪಟ್ಟ ಬೆನ್ನಲ್ಲೇ ರಾಜ್ಯದ ಆಹಾರ ಸುರಕ್ಷತಾ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಸದ್ಯ ಕೊಟ್ಟಾಯಂ, ಎರ್ನಾಕುಲಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳ ಒಟ್ಟು 40 ಹೋಟೆಲ್​​ಗಳ ಬಾಗಿಲು ಮುಚ್ಚಿಸಿ, 62 ಹೋಟೆಲ್​​/ರೆಸ್ಟೋರೆಂಟ್​ಗಳಿಗೆ ದಂಡ ವಿಧಿಸಿದೆ. ಹಾಗೇ, 28 ಹೋಟೆಲ್​​/ರೆಸ್ಟೋರೆಂಟ್​​ ಮಾಲೀಕರಿಗೆ, ಸುರಕ್ಷತಾ ನಿಯಮ ತಪ್ಪಿದರೆ ನೀವು ಕೆಲಸ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಿಟ್ಟಿದೆ.

ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದ 33 ವರ್ಷದ ರಷ್ಮಿ ರಾಜ್​ ಎಂಬುವರು ಡಿಸೆಂಬರ್​ 29ರಂದು ‘ಹೋಟೆಲ್ ಪಾರ್ಕ್​’ ಎಂಬ ಹೆಸರಿನ ರೆಸ್ಟೋರೆಂಟ್​​ನಿಂದ ಅಲ್ ಫಹಾಮ್​ (ಅರೇಬಿಯನ್​ ಚಿಕನ್​) ಆರ್ಡರ್​ ಮಾಡಿ ತರಿಸಿ ತಿಂದಿದ್ದರು. ಆ ಚಿಕನ್​ ತಿನ್ನುತ್ತಿದ್ದಂತೆ ಫುಡ್​ಪಾಯ್ಸನ್​ ಆಗಿ ನರ್ಸ್​ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಅಷ್ಟೇ ಅಲ್ಲ, ಇದೇ ಹೋಟೆಲ್​ನಲ್ಲಿ ಈ ಅಲ್​ ಫಹಾಮ್​ ಚಿಕನ್​ ತಿಂದ ಇನ್ನೂ 20 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಈಗಾಗಲೇ ಹೋಟೆಲ್ ಪಾರ್ಕ್ ರೆಸ್ಟೋರೆಂಟ್​​ನ ಲೈಸೆನ್ಸ್​ ರದ್ದುಗೊಳಿಸಿ, ಬಾಗಿಲು ಮುಚ್ಚುವಂತೆ ಆದೇಶಿಸಿದ್ದಾರೆ.

ಈ ಮಧ್ಯೆ ಕೇರಳ ಆಡಳಿತ ರೂಢ ಪಕ್ಷ ಕಮ್ಯೂನಿಸ್ಟ್ ಪಾರ್ಟಿ ಆಫ್​ ಇಂಡಿಯಾ (ಮಾರ್ಕ್ಸ್​ ವಾದಿ)ದ ಅಂಗಸಂಸ್ಥೆಯಾಗಿರುವ ಡೆಮಾಕ್ರಟಿಕ್​ ಯುತ್​ ಫೆಡರೇಶನ್​ ಆಫ್​ ಇಂಡಿಯಾದ ಸದಸ್ಯರು ಹೋಟೆಲ್​ ಪಾರ್ಕ್​ ಮೇಲೆ ದಾಳಿಯನ್ನೂ ನಡೆಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆಹಾರ ಸುರಕ್ಷತಾ ಇಲಾಖೆ ಕೊಟ್ಟಾಯಂ ವಿಭಾಗದ ಸಹಾಯಕ ಆಯುಕ್ತ ಸಿ.ಆರ್​ರಣದೀಪ್​, ‘ನರ್ಸ್​ ಮೃತಪಟ್ಟಿದ್ದು ಫುಡ್​ ಪಾಯ್ಸನ್​​ನಿಂದ ಹೌದೋ-ಅಲ್ಲವೋ ಎಂಬುದು ಪೋಸ್ಟ್​ಮಾರ್ಟಮ್​ ವರದಿಯ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಆದರೆ ಆ ರೆಸ್ಟೋರೆಂಟ್ ಆಹಾರ ತಿಂದು ಇನ್ನಷ್ಟು ಮಂದಿ ಅಸ್ವಸ್ಥರಾಗಿದ್ದು ಹೌದು. ಇಂಥ ವಿದೇಶಿ ಖಾದ್ಯಗಳಲ್ಲಿ ಬಳಸುವ ಮೇಯನೇಸ್ (ಮೊಟ್ಟೆಯ ಹಳದಿ ಲೋಳೆ, ಎಣ್ಣೆ, ಆಮ್ಲ, ವಿನೆಗರ್​ ಅಥವಾ ಲಿಂಬೆ ರಸ ಸೇರಿಸಿ ತಯಾರಿಸುವ ಒಂದು ಕ್ರೀಮ್​) ಕ್ರೀಮ್​ ಬಳಸಲಾಗುತ್ತದೆ. ಮೇಯನೇಸ್​ ಹಾಕಿದ ಖಾದ್ಯಗಳು ಬಲುಬೇಗನೆ ಹಳಸುತ್ತವೆ. ಈ ಬಗ್ಗೆ ಹೋಟೆಲ್​ನವರು ಕಾಳಜಿ ತೆಗೆದುಕೊಳ್ಳಬೇಕು. ಅಂಥ ಹಳಸಿದ ಆಹಾರಗಳನ್ನು ತಿಂದರೆ ಖಂಡಿತ ಫುಡ್​ಪಾಯ್ಸನ್​ ಆಗುತ್ತದೆ. ಇನ್ನು ಕೊಚ್ಚಿದ ಮಾಂಸಗಳೂ ಕೂಡ ದೇಹಕ್ಕೆ ಅಪಾಯ ಒಡ್ಡುತ್ತವೆ. ಇಂಥ ಮಾಂಸಗಳನ್ನು ಹೆಚ್ಚಿನ ಉರಿಯಲ್ಲಿ ಸರಿಯಾಗಿ ಬೇಯಿಸಬೇಕು. ಅದಿಲ್ಲದೆ ಹೋದರೆ ಬೇಗ ಹಾಳಾಗಿ ಹೋಗುತ್ತದೆ. ಇದು ತಿನ್ನುವವರಿಗೆ ಅಷ್ಟು ಬೇಗ ಗೊತ್ತಾಗುವುದಿಲ್ಲ’ ಎಂದು ವಿವರಿಸಿದ್ದಾರೆ.

ನರ್ಸ್​ ಸಾವಿನ ಬೆನ್ನಲ್ಲೇ ಹೋಟೆಲ್​ಗಳನ್ನು ರೇಡ್​ ಮಾಡಲು ಕೇರಳ ಆಹಾರ ಸುರಕ್ಷತಾ ಇಲಾಖೆ ಸಚಿವರೇ ಸೂಚಿಸಿದ್ದರು. ಹಾಗೇ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಉಪಾಹಾರ ಗೃಹಗಳು, ಹೋಟೆಲ್​​ಗಳನ್ನೂ ಪರಿಶೀಲನೆ ಮಾಡಬೇಕು. ಯಾರಾದರೂ ನೈರ್ಮಲ್ಯತೆ ಕಾಪಾಡುತ್ತಿಲ್ಲ, ಹಳತಾದ, ಹಳಸಿದ ಆಹಾರ ಮಾರುತ್ತಿದ್ದುದು ಕಂಡು ಬಂದರೆ ಅಂಥ ಹೋಟೆಲ್​ಗಳ ಲೈಸೆನ್ಸ್​ ರದ್ದುಗೊಳಿಸಬೇಕು ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಸೂಚಿಸಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಆಹಾರ ವಿಷವಾಗಿ ಜನ ಅಸ್ವಸ್ಥರಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಕಳೆದವಾರ ಪತನಂತಿಟ್ಟ ಜಿಲ್ಲೆಯ ಚರ್ಚ್​ವೊಂದರಲ್ಲಿ ದೀಕ್ಷಾ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಊಟ ಮಾಡಿದ್ದ 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಅದರ ತನಿಖೆಯೂ ನಡೆಯುತ್ತಿದೆ. ಹಾಗೇ, ಕೊಯಿಕ್ಕೋಡ್​​ನಲ್ಲೂ ಇತ್ತೀಚೆಗೆ ಅಂಥದ್ದೇ ಘಟನೆ ನಡೆದಿತ್ತು. ಹೋಟೆಲ್​ವೊಂದರಲ್ಲಿ ತಿಂಡಿ ತಿಂದಿದ್ದ 21 ಮಂದಿ ಆರೋಗ್ಯ ಹದಗೆಟ್ಟಿತ್ತು.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ 2 ತಿಂಗಳು ಮಾತೃತ್ವ ರಜೆ, ಗರ್ಭಪಾತವಾದರೆ 14 ದಿನ ರಜೆ ; ಕೇರಳದಲ್ಲಿ ಪ್ರಥಮ ಪ್ರಯೋಗ!

Exit mobile version