Site icon Vistara News

ಗುಜರಾತ್​​ನಿಂದ 40 ಸಾವಿರಕ್ಕೂ ಹೆಚ್ಚು ಮಹಿಳೆಯರು ಕಣ್ಮರೆ!; ಈ ಸ್ಟೋರಿ ಬಗ್ಗೆ ಮಾತಾಡಿ ಎಂದ ಕಾಂಗ್ರೆಸ್​

40 Thousand Women have gone missing in Gujarat in 5 Years

#image_title

ಗುಜರಾತ್​​ನಿಂದ ಕಳೆದ ಐದು ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಹಿಳೆಯರು ಕಣ್ಮರೆಯಾಗಿದ್ದಾರೆ (Women Missing) ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಧಿಕೃತ ದಾಖಲೆ ನೀಡಿದೆ. 2016ರಿಂದ 2020ರವರೆಗಿನ ಅವಧಿಯ ಲೆಕ್ಕಾಚಾರ ಇದಾಗಿದೆ. 2016ರಲ್ಲಿ 7,105, 2017ರಲ್ಲಿ 7,712, 2018ರಲ್ಲಿ 9,246, 2019ರಲ್ಲಿ 9268 ಮತ್ತು 2020ರಲ್ಲಿ 8,290 ಮಹಿಳೆಯರು ಗುಜರಾತ್​​ನಿಂದ ನಾಪತ್ತೆಯಾಗಿದ್ದಾರೆ. ಇವೆಲ್ಲವುಗಳ ಒಟ್ಟು ಮೊತ್ತ 41,621 ಎಂದು ಎನ್​ಸಿಆರ್​ಬಿ ದಾಖಲೆಯಲ್ಲಿ ಉಲ್ಲೇಖವಾಗಿದೆ. 2021ರಲ್ಲಿ ಗುಜರಾತ್​ ಸರ್ಕಾರ ವಿಧಾನಸಭೆಯಲ್ಲಿ ಕೂಡ ಈ ಬಗ್ಗೆ ಮಾಹಿತಿ ನೀಡಿತ್ತು. 2019-2020ರವರೆಗೆ ಒಂದೇ ವರ್ಷದಲ್ಲಿ ಅಹ್ಮದಾಬಾದ್ ಮತ್ತು ವಡೋದರಾದಿಮದ 4722 ಮಹಿಳೆಯರು ಕಣ್ಮರೆಯಾಗಿದ್ದಾರೆ ಎಂದು ತಿಳಿಸಿತ್ತು.

ಹೀಗೆ ಗುಜರಾತ್​​ನಿಂದ ಮಹಿಳೆಯರು ನಾಪತ್ತೆಯಾಗುವ ಬಗ್ಗೆ ಮಾತನಾಡಿದ ಗುಜರಾತ್​ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ, ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಸುಧೀರ್ ಸಿನ್ಹಾ ‘ಹಲವು ಮಹಿಳೆಯರನ್ನು ಗುಜರಾತ್​ನಿಂದ ಬೇರೆ ರಾಜ್ಯಕ್ಕೆ ಕಳಿಸಿ, ವೇಶ್ಯಾವಾಟಿಕೆಗೆ ತಳ್ಳುವುದನ್ನು ನಾನು ನೋಡಿದ್ದೇನೆ. ಹಲವು ಸಂದರ್ಭಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದಿದ್ದಾರೆ. ‘ಪೊಲೀಸ್ ವ್ಯವಸ್ಥೆಯಲ್ಲಿ ಒಂದು ದೊಡ್ಡ ಸಮಸ್ಯೆಯಿದೆ. ಈ ಮಿಸ್ಸಿಂಗ್ ಕೇಸ್​ಗಳನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ವಾಸ್ತವವಾಗಿ, ಕೊಲೆ ಪ್ರಕರಣಗಳಿಗಿಂತಲೂ ಇಂಥ ನಾಪತ್ತೆ ಪ್ರಕರಣಗಳು ಗಂಭೀರವಾಗಿರುತ್ತವೆ. ಗಂಭೀರವಾಗಿ ತನಿಖೆ ನಡೆಸಬೇಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾಪತ್ತೆ ಪ್ರಕರಣಗಳನ್ನು ಪೊಲೀಸರು ಮೂಲೆಗುಂಪು ಮಾಡುತ್ತಾರೆ. ಇದು ಬ್ರಿಟಿಷ್​ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ನಿಷೇಧ; ಮಮತಾ ಬ್ಯಾನರ್ಜಿ ಆದೇಶ

ಈ ಬಗ್ಗೆ ಮಾತನಾಡಿ ಇನ್ನೊಬ್ಬ ಮಾಜಿ ಪೊಲೀಸ್ ಅಧಿಕಾರಿ ಡಾ. ರಜನ್​ ಪ್ರಿಯದರ್ಶಿ ‘ಹೀಗೆ ಹುಡುಗಿಯರು, ಮಹಿಳೆಯರು ನಾಪತ್ತೆಯಾಗುವುದರ ಹಿಂದಿನ ಮುಖ್ಯ ಕಾರಣ ಮಾನವ ಕಳ್ಳ ಸಾಗಣೆ. ನಾನು ವೃತ್ತಿಯಲ್ಲಿ ಇದ್ದಾಗ ಇದು ನನ್ನ ಗಮನಕ್ಕೆ ಬಂದಿದೆ. ಅದೆಷ್ಟೋ ಮಹಿಳೆಯರ ಮಿಸ್ಸಿಂಗ್ ಕೇಸ್​ ತನಿಖೆ ಮಾಡಿದಾಗ ಅವರೆಲ್ಲರೂ ಇನ್ನೊಂದು ರಾಜ್ಯಕ್ಕೆ ಕರೆದುಕೊಂಡು ಹೋಗಿ, ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಅದೆಷ್ಟೋ ಚಿಕ್ಕಚಿಕ್ಕ ಹುಡುಗಿಯರನ್ನು ಹೀಗೆ ಮಾರಾಟ ಮಾಡಿ, ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಗುಜರಾತ್​ನಿಂದ ಹೊರಬಿದ್ದ ಈ ವರದಿಯನ್ನಿಟ್ಟುಕೊಂಡು ಕಾಂಗ್ರೆಸ್​​ನವರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಈ ವಿಷಯವನ್ನು ಲಿಂಕ್ ಮಾಡಿದ್ದಾರೆ. ಬಿಜೆಪಿ ನಾಯಕರುಗಳು ದಿ ಕೇರಳ ಸ್ಟೋರಿ, ಅಲ್ಲಿಂದ ನಾಪತ್ತೆಯಾದ ಹುಡುಗಿಯರ ಬಗ್ಗೆ ಮಾತನಾಡುತ್ತಾರೆ. ಆದರೆ ಗುಜರಾತ್​​ನಿಂದ 5ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಅದೂ ಕೂಡ ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರ ರಾಜ್ಯ. ಅವರು ಈ ವರದಿ ಬಗ್ಗೆ ಏನು ಹೇಳುತ್ತಾರೆ ಎಂದು ಗುಜರಾತ್​ ಕಾಂಗ್ರೆಸ್​ನ ವಕ್ತಾರರೊಬ್ಬರಾದ ಹಿರೆನ್​ ಬಂಕರ್ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 15-16 ವಯಸ್ಸಿನ ಹುಡುಗಿಯರಿಗೆ ದಿ ಕೇರಳ ಸ್ಟೋರಿ ವಿಶೇಷ ಪ್ರದರ್ಶನ ಏರ್ಪಡಿಸಿ; ಅರವಿಂದ್​ ಕ್ರೇಜಿವಾಲ್​ಗೆ ಬಿಜೆಪಿ ಪತ್ರ

Exit mobile version