Site icon Vistara News

ನೀಟ್‌ ಪರೀಕ್ಷಾರ್ಥಿಗಳ ಬ್ರಾ ಬಿಚ್ಚಿಸಿದ ಪ್ರಕರಣ; ಐವರು ಮಹಿಳೆಯರನ್ನು ಬಂಧಿಸಿದ ಕೇರಳ ಪೊಲೀಸ್‌

Kerala

ಕೊಲ್ಲಂ: ಕೇರಳದ ಕೊಲ್ಲಂನಲ್ಲಿರುವ ನೀಟ್‌ ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಐವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಅರೆಸ್ಟ್‌ ಆದವರೆಲ್ಲ ಮಹಿಳೆಯರೇ ಆಗಿದ್ದಾರೆ. ಈ ವಿಷಯ ಕಳೆದ ಮೂರು ದಿನಗಳಿಂದ ಸುದ್ದಿಯಲ್ಲಿದೆ. ಜುಲೈ 17ರಂದು ನೀಟ್‌ (ವೈದ್ಯಕೀಯ ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆದಿತ್ತು. ಆದರೆ ಕೊಲ್ಲಂನ ಮಾರ್ಥೋಮಾ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯನ್ನು ಮೆಟಾ ಡಿಟೆಕ್ಟರ್‌ ತಪಾಸಣೆಗೆ ಒಳಪಡಿಸಿದಾಗ ಅವರ ಬ್ರಾ ಹುಕ್‌ನಿಂದಾಗಿ ಮಷಿನ್‌ ಸದ್ದು ಮಾಡಿತ್ತು. ಅದಕ್ಕಾಗಿ ಮೇಲ್ವಿಚಾರಕರು ಅವರ ಒಳ ಉಡುಪು ತೆಗೆಸಿದ್ದರು. ಪರೀಕ್ಷೆ ಬರೆಯಲು ಹೋಗಿ ಹೀಗೆ ಅವಮಾನಕ್ಕೆ ಒಳಗಾದ ಹುಡುಗಿಯೊಬ್ಬರ ತಂದೆ ಪೊಲೀಸರಿಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ಆರೋಪವನ್ನು ನಿರಾಕರಿಸಿತ್ತು.

ಕೇರಳದ ಮಾರ್ಥೋಮಾ ಕಾಲೇಜಿನಲ್ಲಿ ಹುಡುಗಿಯರ ಒಳ ಉಡುಪು ಬಿಚ್ಚಿಸಲಾಗಿದೆ ಎಂಬ ವಿವಾದ ದೊಡ್ಡದಾಗುತ್ತಿದ್ದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸತ್ಯ ಶೋಧನ ಸಮಿತಿಯೊಂದನ್ನು ಕೂಡ ರಚಿಸಿದೆ. ಒಂದೆಡೆಯಲ್ಲಿ ಆ ಸಮಿತಿಯೂ ತನಿಖೆ ಪ್ರಾರಂಭಿಸಿದೆ. ಘಟನೆಗೆ ಸಂಬಂಧಪಟ್ಟಂತೆ ಕೇಸ್‌ ದಾಖಲಿಸಿಕೊಂಡಿದ್ದ ಕೇರಳ ಪೊಲೀಸರು ಒಟ್ಟು ಐವರು ಮಹಿಳೆಯರನ್ನು ಮೊದಲು ವಿಚಾರಣೆಗೆ ಒಳಪಡಿಸಿದ್ದರು. ಅದಾದ ಬಳಿಕ ಅವರನ್ನೆಲ್ಲ ಬಂಧಿಸಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಎನ್‌ಟಿಎಯಿಂದ ನೇಮಕಗೊಂಡವರು ಮತ್ತು ಇಬ್ಬರು ಕೊಲ್ಲಂನ ಆಯುರ್‌ನಲ್ಲಿರುವ ಶಿಕ್ಷಣ ಸಂಸ್ಥೆಯೊಂದರ ಸಿಬ್ಬಂದಿ. ಇವರೆಲ್ಲ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಣೆಗೆ ಇದ್ದಿದ್ದರು.

ಇದನ್ನೂ ಓದಿ: ಹುಡುಗಿಯರ ಒಳ ಉಡುಪನ್ನು ತೆಗೆಸಿಲ್ಲ; ಕೊಲ್ಲಂ ನೀಟ್‌ ಪರೀಕ್ಷಾ ಕೇಂದ್ರ ವಿವಾದಕ್ಕೆ ಎನ್‌ಟಿಎ ಸ್ಪಷ್ಟನೆ

ಪರೀಕ್ಷೆ ಬರೆಯಲು ಹೋದವರನ್ನು ಅವಮಾನಕರವಾಗಿ ನಡೆಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಹೆಚ್ಚಾಗಿತ್ತು. ಶನಿವಾರ ವಿವಿಧೆಡೆ ಪ್ರತಿಭಟನೆಗಳೂ ನಡೆದಿದ್ದವು. ಕೊಲ್ಲಂನಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎನ್‌ಟಿಎ ರಚಿತ ಸಮಿತಿ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಇಲಾಖೆ ಪ್ರಮುಖರೊಬ್ಬರು ತಿಳಿಸಿದ್ದಾರೆ. ಹಾಗೇ, ಕೇರಳ ಮಹಿಳಾ ಆಯೋಗ ಕೂಡ ಕೇಸ್‌ ದಾಖಲಿಸಿಕೊಂಡಿದೆ.

ಇದನ್ನೂ ಓದಿ: ಇದ್ಯಾವ ಕರ್ಮ?; ನೀಟ್‌ ಪರೀಕ್ಷೆ ಬರೆಯಲು ಹೋದ ಹುಡುಗಿಯರ ಬ್ರಾ ಬಿಚ್ಚಿಸಿದ ಮೇಲ್ವಿಚಾರಕರು

Exit mobile version