ನವ ದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಉಗ್ರ ಸಂಘಟನೆಯಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇರಳದ ಐವರು ಆರ್‌ಎಸ್‌ಎಸ್ ನಾಯಕರಿಗೆ ಕೇಂದ್ರ ಸರ್ಕಾರ ವೈ (Y)ಶ್ರೇಣಿಯ ಭದ್ರತೆಯನ್ನು ನೀಡಿದೆ. ಪಿಎಫ್‌ಐ ಸಂಘಟನೆಯನ್ನು ಕಳೆದ ಮೂರು ದಿನಗಳ ಹಿಂದೆ (ಸೆ.28) ನಿಷೇಧಿಸಲಾಗಿದೆ. ಅದಕ್ಕೂ ಮೊದಲು ಸೆ.22 ಮತ್ತು 27ರಷ್ಟು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿನ ಪಿಎಫ್‌ಐ ಮುಖಂಡರ ಮನೆ, ಕಚೇರಿಗಳ ಮೇಲೆ ಎನ್ಐಎ ದಾಳಿಯಾಗಿತ್ತು. ಪಿಎಫ್‌ಐ ಉಗ್ರಕೃತ್ಯಗಳಿಗೆ ನೆರವು ನೀಡುತ್ತಿರುವುದಕ್ಕೆ ದೊಡ್ಡಮಟ್ಟದ ಸಾಕ್ಷ್ಯಗಳು ಲಭಿಸಿದ್ದವು. ಹಾಗೇ, ಪಿಎಫ್‌ಐ ಸಂಘಟನೆಯ ಹಿಟ್ಲಿಸ್ಟ್ನಲ್ಲಿ ದೇಶದ ಹಲವು ಪ್ರಮುಖ ನಾಯಕರ ಹೆಸರುಗಳೂ ಇರುವುದು ಬೆಳಕಿಗೆ ಬಂದಿದೆ. ಹೀಗೆ ಹಿಟ್ಲಿಸ್ಟ್ನಲ್ಲಿ ಇರುವವರಲ್ಲಿ ಆರ್ಎಸ್ಎಸ್ನ ಕೇರಳದ ಐವರು ಪ್ರಮುಖ ನಾಯಕರ ಹೆಸರುಗಳೂ ಇದ್ದು, ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ.
ಪಿಎಫ್‌ಐ ಮೇಲೆ ವಿವಿಧ ಹಂತದ ರೇಡ್ ನಡೆಸಿ, ತನಿಖೆ ಮಾಡಿದ ನಂತರ ಎನ್ಐಎ ಮತ್ತು ಗುಪ್ತಚರದಳಗಳು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದವು. ಹಾಗೇ, ಆಯ್ದ ಆರ್‌ಎಸ್‌ಎಸ್ ನಾಯಕರಿಗೂ ಭದ್ರತೆ ನೀಡಲು ಶಿಫಾರಸ್ಸು ಮಾಡಿದ್ದವು. ಅದರ ಅನ್ವಯ ಈಗ ಕೇರಳದ ಐವರು ನಾಯಕರಿಗೆ ಕೇಂದ್ರ ಸರ್ಕಾರ ಸಿಆರ್ಪಿಎಫ್ (CRPF) ಭದ್ರತೆ ನೀಡಲಿದೆ. ಒಬ್ಬ ನಾಯಕನ ರಕ್ಷಣೆಗೆ ಇಬ್ಬರು ಅಥವಾ ಮೂವರು ಸಿಆರ್ಪಿಎಫ್ ಕಮಾಂಡೋಗಳು ನಿಯೋಜನೆಗೊಳ್ಳಲಿದ್ದಾರೆ.
ಇದನ್ನೂ ಓದಿ: PFI Banned | ರಾಜ್ಯಾದ್ಯಂತ ಪಿಎಫ್‌ಐ ಕಚೇರಿಗಳಿಗೆ ಬೀಗ, ಜಿಲ್ಲೆಗಳಲ್ಲಿ ಹಲವು ನಾಯಕರಿಗಾಗಿ ಹುಡುಕಾಟ