ಲಖನೌ: ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ (Atiq Ahmed Murder) ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಯಾಗ್ರಾಜ್ನ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇವರೆಲ್ಲರೂ ಶಾಹ್ಗಂಜ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವವರು ಆಗಿದ್ದರು ಎಂದು ಹೇಳಲಾಗಿದೆ. ಅತೀಕ್ ಅಹ್ಮದ್ ಮತ್ತು ಅಶ್ರಫ್ನನ್ನು ಏಪ್ರಿಲ್ 15ರಂದು ಪ್ರಯಾಗ್ರಾಜ್ನ ವೈದ್ಯಕೀಯ ಕಾಲೇಜಿಗೆ ತಪಾಸಣೆಗೆಂದು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅವರ ಸುತ್ತ ಪೊಲೀಸರು, ಎದುರುಗಡೆ ಮಾಧ್ಯಮದವರು ಎಲ್ಲರೂ ಇದ್ದರೂ, ಹಿಂದಿನಿಂದ ಬಂದ ಹಂತಕರು ಶೂಟ್ ಮಾಡಿದ್ದರು. ಅದರ ವಿಡಿಯೊ ಎಲ್ಲೆಡೆ ವೈರಲ್ ಕೂಡ ಆಗಿದೆ. ಅನೇಕಾನೇಕರು ಇದು ಪೊಲೀಸರ ಭದ್ರತಾ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಈಗ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅತೀಕ್ ಮತ್ತು ಅಶ್ರಫ್ ಸುತ್ತಲೂ ಅಷ್ಟು ಮಂದಿ ಪೊಲೀಸರು ಇದ್ದಾಗ್ಯೂ ಆತನ ಮೇಲೆ ಆರೋಪಿಗಳು ಅಷ್ಟು ಹತ್ತಿರದಿಂದ ಗುಂಡು ಹಾರಿಸಲು ಸಾಧ್ಯವಾಗಿದ್ದಾದರೂ ಹೇಗೆ? ಇಲ್ಲಿ ಭದ್ರತಾ ವೈಫಲ್ಯ ಆಗಿದ್ದು ಹೇಗೆ ಎಂಬ ಬಗ್ಗೆ ಇಲಾಖಾ ಮಟ್ಟದ ತನಿಖೆ ನಡೆಸಲು ಪ್ರಯಾಗ್ರಾಜ್ ಪೊಲೀಸ್ ಆಯುಕ್ತ ರಮಿತ್ ವರ್ಮಾ ಆದೇಶ ನೀಡಿದ್ದಾರೆ. ಹಾಗೇ, ಅತೀಕ್ ಮತ್ತು ಅಶ್ರಫ್ ಹತ್ಯೆಯಲ್ಲಿ ಅವರ ಜತೆಗಿದ್ದ ಪೊಲೀಸರ ಪಾತ್ರವೇನಾದರೂ ಇದೆಯಾ ಎಂಬ ಆಯಾಮದಲ್ಲೂ ತನಿಖೆ ಕೈಗೊಳ್ಳುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅತೀಕ್ ಅಹ್ಮದ್ ಹಂತಕರು 4ದಿನ ಪೊಲೀಸ್ ಕಸ್ಟಡಿಗೆ; ಪತ್ನಿ ಶೈಷ್ಟಾ ಪರ್ವೀನ್ ಪತ್ತೆಗೆ ಬಲೆ ಬೀಸಿರುವ ಉತ್ತರ ಪ್ರದೇಶ ಪೊಲೀಸ್
ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜುಪಾಲ್ ಹತ್ಯೆ ಮತ್ತು ಅವರ ಕೊಲೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿದ್ದ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ವಿರುದ್ಧ ಇನ್ನೂ ಹಲವು ಕೇಸ್ಗಳು ಇದ್ದು, ಪ್ರಯಾಗ್ರಾಜ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅವರಿಬ್ಬರನ್ನೂ ಗುಜರಾತ್ನ ಸಬರಮತಿ ಜೈಲಿನಲ್ಲಿ ಇಟ್ಟು, ವಿಚಾರಣೆಗಾಗಿ ಇಲ್ಲಿ ಕರೆದುಕೊಂಡು ಬಂದು, ಮುಗಿಯುತ್ತಿದ್ದಂತೆ ಮತ್ತೆ ಗುಜರಾತ್ಗೆ ಕರೆದೊಯ್ಯಲಾಗುತ್ತಿತ್ತು. ಏಪ್ರಿಲ್ 15ರಂದು ಕೂಡ ಅವರಿಬ್ಬರ ವಿಚಾರಣೆ ಕೋರ್ಟ್ನಲ್ಲಿ ಮುಗಿದಿತ್ತು. ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗಲೇ ಹತ್ಯೆಯಾಗಿದೆ. ಶೂಟರ್ಗಳಾದ ಲೋವ್ಲೇಶ್, ಸನ್ನಿ ಮತ್ತು ಅರುಣ್ನನ್ನು ಈಗಾಗಲೇ ಬಂಧಿಸಿ, ಸದ್ಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳಿಸಲಾಗಿದೆ.